ಮಾರ್ಕನ ಪರಿಚಯ



ಗೆತ್ಸೆಮನಿ ತೋಪಿನಲ್ಲಿ ಯೇಸುವಿನ ಬಂಧನವಾದಾಗ ಅವರ ಶಿಷ್ಯರು ಅಲ್ಲಿಂದ ಪಲಾಯನಗೈಯುತ್ತಾರೆ. ಯೇಸುವಿನ ಬಳಿ ಅವರ ವಿರೋಧಿಗಳ ಹೊರತು ಬೇರಾರೂ ಇರುವುದಿಲ್ಲ. ಆದರೆ ಅವರನ್ನು ಅಲ್ಲಿಂದ ಕರೆದೊಯ್ಯುವಾಗ ಅವರ ಹಿಂದೆ ದುಪ್ಪಟಿಯನ್ನು ಹೊದ್ದ ಓರ್ವ ಕಿಡಿಗೇಡಿ ತರುಣ ಹಿಂಬಾಲಿಸುತ್ತಾನೆ. ಯೆಹೂದ್ಯರು ಅದನ್ನು ಗಮನಿಸಿ ಅವನನ್ನು ಹಿಡಿಯಲು ಪ್ರಯತ್ನಿಸಿದಾಗ ದುಪ್ಪಟಿಯನ್ನು ಅವರ ಕೈಯಲ್ಲೇ ಬಿಟ್ಟು ಬೆತ್ತಲೆಯಾಗಿ ಆ ತರುಣ ಓಡಿಹೋಗುತ್ತಾನೆ. ಇದು ಮಾರ್ಕನ ಸುಸಂದೇಶದಲ್ಲಿ ವರ್ಣಿತವಾಗಿರುವ ಒಂದು ಘಟನೆ.
ಹೀಗೆ ದುಪ್ಪಟಿಯನ್ನು ಬಿಟ್ಟು ಬೆತ್ತಲೆಯಾಗಿ ಓಡಿದ ಆ ತರುಣ ಯಾರಿರಬಹುದು ಎಂಬ ಕುತೂಹಲ ಸಹಜವಾಗಿ ಯಾರಲ್ಲೂ ಮೂಡಬಹುದು. ಈ ಘಟನೆ ಮಾರ್ಕನ ಸುಸಂದೇಶದ ಹೊರತಾಗಿ ಇನ್ನೆಲ್ಲೂ ಕಂಡು ಬರುವುದಿಲ್ಲ. ಸ್ವಯಂ ಮಾರ್ಕನೇ ಆತ! ಎಂಬುದಕ್ಕೆ ಬೇರಾವ ತರ್ಕದ ಅಗತ್ಯವೂ ಇಲ್ಲ. ಇತರ ಸುಸಂದೇಗಳಲ್ಲ್ಲಿ ಕಂಡು ಬರದ ಈ ಸನ್ನಿವೇಶ ಮಾರ್ಕನ ಕೃತಿಯಲ್ಲಿರುವುದೇ ಅದಕ್ಕೆ ಸಾಕ್ಷಿ.
ಇಂತಹ ಇನ್ನ್ನೊಂದು ಘಟನೆಯೂ ಮಾರ್ಕನ ಕೃತಿಯಲ್ಲಿ ಉಲ್ಲೇಖಿತವಾಗಿದೆ. ಅದು ಇತರ ಸುಸಂದೇಶಗಳಲ್ಲಿದ್ದರೂ ಮಾರ್ಕನ ಕೃತಿಯಲ್ಲಿದ್ದಂತೆ ಸ್ಪಷ್ಟವಾಗಿಲ್ಲ. 
'ಯೇಸುವಿನ ಶಿಷ್ಯರು ಪಾಸ್ಕ ಹಬ್ಬದ ಕುರಿಯನ್ನು ಕೊಯ್ಯುವ ದಿನ ಅವರ ಬಳಿ ಬಂದು, ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ದಪಡಿಸಬೇಕೆನ್ನುತ್ತೀರಿ? ಎಂದು ಕೇಳಿದಾಗ ಯೇಸುವು, ನೀವು ಪಟ್ಟಣಕ್ಕೆ ಹೋಗಿರಿ. ಅಲ್ಲಿ ನೀರಿನ ಕೊಡವನ್ನು ಹೊತ್ತವನು ನಿಮ್ಮನ್ನು ಎದುರುಗೊಳ್ಳುವನು. ಅವನ ಹಿಂದೆಯೇ ಹೋಗಿ ಅವನು ಯಾವ ಮನೆಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ 'ನಮ್ಮ ಗುರು, 'ನನ್ನ ಶಿಷ್ಯರ ಜೊತೆ ಪಾಸ್ಕ ಭೋಜನ ಮಾಡಲು ನನಗೆ ಕೊಠಡಿ ಎಲ್ಲಿ?' ಎಂದು ಕೇಳುತ್ತಾರೆ ಎಂದು ವಿಚಾರಿಸಿರಿ. ಅವನು ಮೇಲುಪ್ಪರಿಗೆಯಲ್ಲಿ ಸಿದ್ದವಾಗಿರುವ ಹಾಗೂ ಸುಸಜ್ಜಿತವಾದ ದೊಡ್ಡ ಕೊಠಡಿಯನ್ನು ತೋರಿಸುವನು. ಅಲ್ಲಿ ನಮಗೆ ಊಟ ಸಿದ್ದ ಮಾಡಿರಿ ಎನ್ನುವನು.' ಇಲ್ಲಿ ಯೇಸುವಿಗಾಗಿ ಪಾಸ್ಕ ಭೋಜನಕ್ಕೆ ಸಿದ್ದ ಪಡಿಸಿದ ಕೋಣೆಯನ್ನು ಹೊಂದಿರುವವನು ಮಾರ್ಕನ ತಂದೆ; ಹಾಗೂ ನೀರಿನ ಕೊಡವನ್ನು ಹೊತ್ತವನು ಸ್ವಯಂ ಮಾರ್ಕ! ಈ ಮನೆಯೇ ಯೇಸುವಿನ ಮರಣಾನಂತರದ ಪ್ರೇಷಿತರ ಕಾರ್ಯಚಟುವಟಿಕೆಯ ಕಾರ್ಯಸ್ಥಾನವಾಗುವುದು ಎಂಬುದು ಗಮನಿಸಬೇಕಾದ ಅಂಶ.
ಯೇಸುಕ್ರಿಸ್ತರ ಜನನಾನಂತರದ ಸುಮಾರು ಹದಿನೈದು ವರ್ಷಗಳ ತರುವಾಯ ಹುಟ್ಟಿದ ಮಾರ್ಕನ ಪೂರ್ಣ ಹೆಸರು 'ಯೊವಾನ್ನ ಮಾರ್ಕ'; ಊರು ಪಶ್ಚಿಮ ಲಿಬ್ಯದ ಸಿರೇನ್ಯ(ಪ್ರಸಕ್ತ 'ಷಹತ್'). ತಂದೆ ಅರಿಸ್ಟೊಪೊಲೊಸ್ ಮತ್ತು ತಾಯಿ ಮೇರಿ. ಯೆಹೂದಿಗಳಾದ ಇವರು ತಮ್ಮ ತಾಯಿನಾಡಾದ ಪ್ಯಾಲೆಸ್ಟಿನ್‌ಗೆ ಮರಳುತ್ತಾರೆ. ಜೆರುಸಲೇಂನಲ್ಲಿ ನೆಲೆನಿಲ್ಲುತ್ತಾರೆ. ಅಲ್ಲಿ ಅರಿಸ್ಟೊಪೊಲೊಸ್‌ನಿಗೆ ಯೇಸುವಿನ ಶಿಷ್ಯ ಸಿಮೋನ್ ಪೇತ್ರನ ಪರಿಚಯವಾಗುವುದು. ಅರಿಸ್ಟೊಪೊಲೊಸ್‌ನ ಮರಣಾನಂತರ ಆ ಕುಟುಂಬಕ್ಕೆ ಆಸರೆಯಾಗುವವನು ಇದೇ ಪೇತ್ರ. ಮಾರ್ಕನ ಪಾಲನೆ ಪೋಷಣೆಯ ಹೊಣೆಯನ್ನೂ ಪೇತ್ರ ಹೊರುತ್ತಾನೆ.
ಯೇಸುವಿನ ಮರಣ ಮತ್ತು ಸ್ವರ್ಗಾರೋಹಣದ ನಂತರ ಧರ್ಮಪ್ರಚಾರದ ಕಾರ್ಯಕ್ಷೇತ್ರವಾಗಿ ಪರಿವರ್ತನೆಯಾದದ್ದು ಅರಿಸ್ಟೊಪೊಲೊಸ್‌ನ ಮನೆ. ಪೇತ್ರನು ಬಂಧಿತನಾಗಿ ದೇವದೂತರ ಸಹಾಯದಿಂದ ಬಿಡುಗಡೆ ಹೊಂದಿ ನೇರವಾಗಿ ಧಾವಿಸಿದ್ದು ಇದೇ ಮನೆಗೆ. ಹೀಗಾಗಿ ಆ ಮನೆಯಲ್ಲಿದ್ದ ಮಾರ್ಕನಿಗೆ ಧರ್ಮಪ್ರಚಾರದಲ್ಲಿ ಸ್ವಾಭಾವಿಕವಾಗಿಯೇ ಆಸಕ್ತಿ ಮೂಡಿರುತ್ತದೆ. ಆದರೆ ಆಗ ಮಾರ್ಕನದು ಕಿರಿಯ ವಯಸ್ಸು.  ವಯಸ್ಸಿಗೆ ಸಹಜವಾದ ಹೊಣೆಗೇಡಿತನ, ತುಂಟತನಗಳು ಅವನಲ್ಲಿ ಇದ್ದವು. ಜೊತೆಗೆ ಬೇಜವಾಬ್ದಾರಿತನ ಮೈಹೊತ್ತು ನಿಂತಿತ್ತು. ಗಾಂಭೀರ್ಯವೆಂಬುದು ಅವನಲ್ಲಿ ಲವಲೇಶವೂ ಇರಲಿಲ್ಲ. ಆರಂಭಶೂರತ್ವದ ಹುಡುಗು ಬುದ್ದಿ ಅವನದಾಗಿತ್ತು. ಹೀಗಿದ್ದಾಗಲೇ ಮಾರ್ಕನು ಮತ್ತೊಮ್ಮೆ ಓಡಿಹೋಗುವ ಘಟನೆ ಸಂಭವಿಸುತ್ತದೆ. 
ಜೆರುಸಲೇಂ ಭೀಕರ ಕ್ಷಾಮಕ್ಕೆ ತುತ್ತಾದಾಗ ನೆರವು ನೀಡಲು ಬಾರ್ನಬನೆಂಬವನು ಪೌಲನೊಂದಿಗೆ ಅಲ್ಲಿಗೆ ಧಾವಿಸುತ್ತಾನೆ. ಯೇಸುವಿನ ಶಿಷ್ಯರನ್ನು ಹಿಂಸಿಸುತ್ತಿದ್ದ ಪೌಲ ಆಗಷ್ಟೆ ಯೇಸುವಿನ ಪ್ರಭಾವಕ್ಕೆ ಒಳಗಾಗಿ ಪರಿವರ್ತಿತನಾಗಿದ್ದ. ಈಗವನು ಯೇಸುವಿಗಾಗಿ ಪ್ರಾಣ ಕೊಡಲೂ ಸಿದ್ಧನಾಗಿದ್ದ. ಪೌಲನನ್ನು ಜೆರುಸಲೇಂನಲ್ಲ್ಲಿ ಎಲ್ಲಾ ಪ್ರೇಷಿತರಿಗೂ ಪರಿಚಯಿಸುತ್ತಾನೆ ಬಾರ್ನಬ. ಮಾರ್ಕನಿಗೂ ಪೌಲನ ಪರಿಚಯವಾದದ್ದು ಆಗಲೇ; ಕಾರಣ ಮಾರ್ಕ ಬಾರ್ನಬನ ಸೋದರ ಸಂಬಂಧಿ! ಮುಂದೆ ಪೌಲ, ಬಾರ್ನಬ ಮತ್ತು ಮಾರ್ಕರು ಸೇರಿ ಅನೇಕ ಧರ್ಮಪ್ರಚಾರ ಕಾರ್ಯಗಳನ್ನು ಕೈಗೊಳ್ಳುತ್ತಾರೆ.  ಆದರೆ ಪೊಂಫಿಲಿಯಾ ಬಳಿಯ ಪೆರ್ಗ ಎಂಬಲ್ಲಿ ಪೌಲ ಮತ್ತು ಬಾರ್ನಬರು ಧರ್ಮಪ್ರಚಾರ ಕೈಗೊಳ್ಳಬೇಕಾಗಿದ್ದ ಸಂದರ್ಭದಲ್ಲಿ ಅವರಿಬ್ಬರನ್ನೂ ಅಲ್ಲೇ ಬಿಟ್ಟು ಮಾರ್ಕನು ಜೆರುಸಲೇಮಿಗೆ ಹಿಂದಿರುಗುತ್ತಾನೆ. ಇದು ಪೌಲನನ್ನು ಕೆರಳುವಂತೆ ಮಾಡುತ್ತದೆ. ಹೀಗಾಗಿ ಮುಂದೊಮ್ಮೆ ಧರ್ಮಪ್ರಚಾರ ಕಾರ್ಯದಲ್ಲಿ ಆಸಕ್ತಿ ತೋರಿದ ಬಾರ್ನಬನು ಎಷ್ಟೇ ಶಿಫಾರಸ್ಸು ಮಾಡಿದರೂ ಪೌಲನು ಮಾರ್ಕನನ್ನು ಕರೆದೊಯ್ಯಲು ಒಪ್ಪುವುದಿಲ್ಲ. ಇದು ಬಾರ್ನಬ ಮತ್ತು ಪೌಲರ ನಡುವಿನ ಒಡಕಿಗೆ ಕಾರಣವಾಗುತ್ತದೆ. ಆ ನಂತರ ಬಾರ್ನಬ ಮತ್ತು ಮಾರ್ಕರು ಪೌಲನಿಂದ ಬೇರೆಯಾಗಿ ಧರ್ಮಪ್ರಚಾರ ಕಾರ್ಯ ಕೈಗೊಳ್ಳುತ್ತಾರೆ. ಅನಂತರದ ದಿನಗಳಲ್ಲಿ ಮಾರ್ಕನು ಗಮನಾರ್ಹವಾಗಿ ಬದಲಾಗುತ್ತಾನೆ. ಕೈಗೊಂಡ ಪ್ರಚಾರಕಾರ್ಯಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತಾನೆ. ಮಾರ್ಕನ ಅದ್ಭುತವಾದ ಕಾರ್ಯಚಟುವಟಿಕೆಗಳನ್ನು ಕಂಡು ಪೌಲನು ಪ್ರಸನ್ನನಾಗುತ್ತಾನೆ. ಅವನು ತಿಮೋಥೆಯನಿಗೆ ಬರೆದ ಪತ್ರದಲ್ಲಿ, ನೀನು ಬರುವಾಗ ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನ ಸೇವೆ ನನಗೆ ಅಗತ್ಯವಾಗಿದೆ, ಎಂದು ವಿನಂತಿಸುತ್ತಾನೆ. ಕ್ರಿ.ಶ.೬೦ರಲ್ಲಿ ಪೌಲನೊಂದಿಗೆ ಸೆರೆವಾಸವನ್ನು ಅನುಭವಿಸುತ್ತಾನೆ ಮಾರ್ಕ. ಆಗ ಪೌಲನೊಂದಿಸೆ ಸೆರೆಯಾಳಾಗಿದ್ದ ಇತರ ಐವರಲ್ಲಿ ಮಾರ್ಕ ಮತ್ತು ಲೂಕರಿದ್ದರು ಎನ್ನುವುದಕ್ಕೆ ಪೌಲನು ಫಿಲೆಮೋನನಿಗೆ ಬರೆದ ಪತ್ರವೇ ಸಾಕ್ಷ್ಯಾಧಾರ. ಮುಂದೊಂದು ದಿನ ಸೈಪ್ರಸ್‌ನಲ್ಲಿ ಮತ್ತೆ ಪೌಲನ ಭೇಟಿಯಾಗುತ್ತದೆ. ಹಳೆಯ ಗೆಳೆತನ ಮತ್ತೆ ಚಿಗುರುತ್ತದೆ. ಅವರು ಮತ್ತೆ ಒಂದಾಗಿ ಧರ್ಮಪ್ರಚಾರವನ್ನು ಮುಂದುವರಿಸುತ್ತಾರೆ. ಮುಂದೆ ಮಾರ್ಕನು ಪೀಟರ್‌ನ ಕಾರ್ಯದರ್ಶಿಯೂ, ದ್ವಿಭಾಷಿಯೂ ಆಗಿ ಕಾರ್ಯವನ್ನು ನಿರ್ವಹಿಸುತ್ತಾನೆ. ಈ ನಡುವೆ ಸುಸಂದೇಶದ ಕೃತಿಯ ರಚನೆಯಲ್ಲೂ ತೊಡಗುತ್ತಾನೆ. ಗ್ರೀಕ್ ಭಾಷೆಯಲ್ಲಿ ರಚಿಸಲ್ಪಟ್ಟ ಈ ಕೃತಿಯು ಪೂರ್ಣಗೊಂಡದ್ದು ಕ್ರಿ.ಶ. 60-65ರ ನಡುವೆ; ಕೃತಿಯನ್ನು ರಚಿಸಿದ್ದು ರೋಂ ನಗರದಲ್ಲಿ. 
ಮಾರ್ಕನ ಸುಸಂದೇಶವೆಂಬುದು ಸುಸಂದೇಶ ಪುಸ್ತಕಗಳಲ್ಲೇ ಅತ್ಯಂತ ಕಿರಿದಾದ ಹಾಗು ಸರಳ ವಿವರಣೆಗಳಿರುವ ಒಂದು ಕೃತಿ. 'ದೇವರಪುತ್ರರಾದ ಯೇಸುಕ್ರಿಸ್ತರ ಶುಭಸಂದೇಶ' ಎಂಬ ಸಂದೇಶದೊಂದಿಗೆ ಕೃತಿಯ ಪುಟಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. 'ದೇವರಪುತ್ರ', 'ದೇವಕುಮಾರ' ಎಂಬೀ ಪದಗಳ ಬಳಕೆ ಹೆಚ್ಚಾಗಿ ಕಾಣಿಸುವುದೇ ಮಾರ್ಕನ ಸುಸಂದೇಶಗಳಲ್ಲಿ ಎಂಬುದಿಲ್ಲಿ ಗಮನಾರ್ಹ! ಯೇಸುವಿನ ಪ್ರೌಢಾವಸ್ಥೆಯ ಕೊನೆಯ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಭವಿಸಿದ ಘಟನೆಗಳನ್ನು ಮಾತ್ರವೇ ಒಳಗೊಂಡಿರುವ ಈ ಕೃತಿಯು, ಸ್ನಾನಿಕ ಯೊವಾನ್ನನ ಪ್ರಕರಣದಿಂದ ಆರಂಭಗೊಂಡು ಯೇಸುವಿನ ಸ್ವರ್ಗಾರೋಹಣದೊಂದಿಗೆ ಮುಕ್ತಾಯವಾಗುತ್ತದೆ. ಮರಿಯಮ್ಮನವರಿಗೆ ದೇವದೂತರ ಸಂದೇಶ, ಯೇಸುವಿನ ಜನನ, ಹೆರೋದರಸನ ಸಂಚು, ಈಜಿಪ್ಟ್‌ಗೆ ಪಲಾಯನ ಮುಂತಾದ ವಿಷಯಗಳನ್ನು ಬಿಟ್ಟು ಸ್ನಾನಿಕ ಯೋಹಾನ್ನನ ಪರಿಚಯಕ್ಕೆ ಮುನ್ನುಡಿಯಾಗಿ ಯೆಶಾಯ ಪ್ರವಾದಿಯ ಪ್ರವಾದನೆಯ ವಾಕ್ಯಗಳನ್ನು ನೀಡಿ, ನೇರವಾಗಿ ಸುಸಂದೇಶವನ್ನು ಆರಂಭಿಸಲಾಗಿದೆ. ಯೇಸುವಿನ ಪರ್ವತ ಪ್ರಸಂಗ ಮತ್ತಿತರ ಬೋಧನೆಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಕೆಲವೇ ಕೆಲವು ಸಾಮತಿಗಳು ಮತ್ತು ಕನಿಷ್ಟ ಹತ್ತೊಂಬತ್ತು ಪವಾಡಗಳು ಕೃತಿಯಲ್ಲಿ ದಾಖಲಾಗಿವೆ. ಹೆಚ್ಚಿನ ವಿವರಗಳನ್ನು ಟಿಪ್ಪಣಿಯಂತೆ ಸಂಕ್ಷಿಪ್ತವಾಗಿ ಹೇಳುತ್ತಾ ಕರ್ತೃವು ಕೃತಿಯನ್ನು ಸರಳವಾಗಿಸಿದ್ದಾನೆ, 'ಮಾತಿಗಿಂತ ಕೃತಿಯೇ ಮೇಲು' ಎಂಬ ವಾದ ಮಾರ್ಕನದು; ಹಾಗಾಗಿ ಯೇಸುವಿನ ಮಾತುಗಳಿಗೆ ಪ್ರಾಧಾನ್ಯತೆ ಇಲ್ಲ, ಅವರು ಸಾಧಿಸಿದ ಕಾರ್ಯಗಳ ಕುರಿತ ವಿವರಗಳೇ ಹೆಚ್ಚು. ಒಟ್ಟು 16 ಅಧ್ಯಾಯಗಳಿರುವ, 678 ಸಂಖ್ಯಾರೂಪದ ವಾಕ್ಯಗಳನ್ನು ಹೊಂದಿರುವ ಈ ಕೃತಿಯನ್ನು ಸರಿಸುಮಾರು 1330 ಪದಗಳಷ್ಟನ್ನೇ ಬಳಸಿ ರಚಿಸಲಾಗಿದೆಯೆಂದರೆ ಇದರ ಗಾತ್ರ ಎಷ್ಟಿರಬಹುದೆಂದು ಯಾರೂ ಉಹಿಸಬಹುದು. 
ವೆನಿಸ್‌ ನಗರದಲ್ಲಿರುವ ಸಂತ ಮಾರ್ಕರ ಪ್ರಧಾನಾಲಯ. ಸಂತರ ಅವಶೇಷಗಳನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ ಎನ್ನಲಾಗುತ್ತಿದೆ.
ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿ ಕ್ರಿ.ಶ.48ರ ಸುಮಾರಿನಲ್ಲಿ ಸುಸಂದೇಶವನ್ನು ಸಾರುವುದರ ಮೂಲಕ ಅಲ್ಲಿ ಕ್ರೈಸ್ತಮತದ ಉಗಮಕ್ಕೆ ಮಾರ್ಕ ಕಾರಣನಾಗುತ್ತಾನೆ. ವಿಪರ್ಯಾಸವೆಂದರೆ  ಮಾರ್ಕನು ಅಲ್ಲೇ ಹುತಾತ್ಮನೂ ಆಗುತ್ತಾನೆ. ಸುಮಾರು ಕ್ರಿ.ಶ.68ರಲ್ಲಿ ಅಲೆಕ್ಸಾಂಡ್ರಿಯಾದ ಸೆರಾಪಿಯನ್ ಅಬ್ಬಿಸ್ ಎಂಬ ದೇವತೆಯ ಆರಾಧಕರು ಇವನನ್ನು ಕುದುರೆಯ ಬಾಲಕ್ಕೆ ಕಟ್ಟಿ ಎರಡು ದಿನಗಳ ಕಾಲ ಊರ ರಸ್ತೆಗಳಲ್ಲಿ ಎಳೆದಾಡಿದರಂತೆ. ಆಗ ಛಿದ್ರವಾದ ಮಾರ್ಕನ ದೇಹದ ಅವಶೇಷಗಳಲ್ಲಿ ತಲೆಯನ್ನು ಅಲೆಕ್ಸಾಂಡ್ರಿಯಾದ ಸಂತ ಮಾರ್ಕ್‌ರ ಚರ್ಚಿನಲ್ಲಿರಿಸಲಾಗಿದೆಯಂತೆ, ಇನ್ನುಳಿದ ಅವಶೇಷಗಳಲ್ಲಿ ಕೆಲವನ್ನು ಕೈರೋದ ಸಂತ ಮಾರ್ಕ್‌ರ ಚರ್ಚಿನಲ್ಲೂ ಹಾಗೂ ಉಳಿದವನ್ನು ಇಟಲಿಯ ವೆನಿಸ್‌ನಲ್ಲಿರುವ ಸ್ಯಾನ್ ಮಾರ್ಕೋ ಪ್ರಧಾನಾಲಯದಲ್ಲೂ ಇರಿಸಲಾಗಿದೆಯಂತೆ. ಒಂದು ಮಾಹಿತಿಯ ಪ್ರಕಾರ ವೆನಿಸ್‌ನ ಜನರು* ಕ್ರಿ.ಶ.828ರಲ್ಲಿ ಮಾರ್ಕರ ತಲೆಯನ್ನು ಅಲೆಕ್ಸಾಂಡ್ರಿಯಾದಿಂದ ಕದ್ದು ತಂದು, ವೆನಿಸ್‌ನ ಚರ್ಚ್‌ನಲ್ಲಿರಿಸಿದರಂತೆ. ಆ ನಂತರ ವೆನಿಸ್ ನಗರವು ಸಂಪದ್ಭರಿತವಾಯಿತೆಂದು ಹೇಳಲಾಗುತ್ತಿದೆ.
ಮಾರ್ಕ್‌ನನ್ನು 'ಸಿಂಹ ಹೃದಯದ ಮಾರ್ಕ' ಎಂದೂ ಕರೆಯುತ್ತಾರೆ. ಒಂದು ವಾಡಿಕೆಯ ಪ್ರಕಾರ ಮಾರ್ಕನನ್ನು ವಿರೋಧಿಗಳು ಸಿಂಹದ ಬೋನಿಗೆ ಎಸೆದರಂತೆ. ಬೋನಿನಲ್ಲಿದ್ದ ಸಿಂಹಗಳು ಮಾರ್ಕ್‌ನನ್ನು ನೋಡಿಯೂ ಸುಮ್ಮನಾದವಂತೆ. ಹೀಗಾಗಿ ಮುಂದೆ ಮಾರ್ಕ್‌ನ ಪ್ರತಿರೂಪದ ಜೊತೆಗೆ ಸಿಂಹವನ್ನು ಗುರುತಿಸುವುದು ಚಾಲ್ತಿಗೆ ಬಂದಿತೆನ್ನಲಾಗಿದೆ.

ಏಪ್ರಿಲ್ 25ರಂದು ಸಂತ ಮಾರ್ಕರ ಹಬ್ಬವನ್ನು ಆಚರಿಸಲಾಗುತ್ತದೆ. ಇವರನ್ನು 'ಲೇಖಕರ ಪಾಲಕರು' ಎಂದು ಹೇಳಲಾಗುತ್ತಿದೆ.

                              
* ಒಂದು ಮಾಹಿತಿಯ ಪ್ರಕಾರ, ಒಮ್ಮೆ ಮಾರ್ಕನು ಇಟಲಿಗೆ ಹೋಗುತ್ತಿದ್ದಾಗ, ಭವ್ಯ ಕಾಲುವೆಗಳ ನಗರವೆನಿಸಿದ ವೆನಿಸ್ ನಗರದ ಬಳಿಯ ಉಪ್ಪು ನೀರಿನ ಹರವಿನೊಳಕ್ಕೆ ಪ್ರವೇಶಿಸಿದರಂತೆ. ಅದೇ ಸಮಯಕ್ಕೆ ಅವರಿಗೆ ದೇವದೂತರು ಕಾಣಿಸಿಕೊಂಡು, 'Pax tibi Marce, evangelista meus. Hic requiescet corpus tuum(ಶಾಂತಿಯು ನಿನ್ನೊಂದಿಗಿರಲಿ. ಸುಸಂದೇಶಕರ್ತ ಮಾರ್ಕನೇ, ನಿನ್ನ ದೇಹವು ಇಲ್ಲಿಯೇ ವಿಶ್ರಾಂತಿಯನ್ನು ಪಡೆಯುವುದು)' ಎಂದು ಹೇಳಿದರಂತೆ. ಇದೇ ಕಾರಣಕ್ಕೆ ಅವರ ದೇಹದ ಅವಶೇಷಗಳನ್ನು ಇಲ್ಲಿಯ ಸ್ಯಾನ್ ಮಾರ್ಕೋ ಪ್ರಧಾನ ದೇವಾಲಯದಲ್ಲಿ ತಂದು ಇರಿಸಲಾಗಿದೆಯೆಂದು ಹೇಳುತ್ತಾರಲ್ಲದೇ ಇವರನ್ನು ವೆನಿಸ್ ನಗರದ ಪಾಲಕ ಸಂತರನ್ನಾಗಿ ಮಾಡುತ್ತಾರೆ. ರೆಕ್ಕೆಗಳಿರುವ ಸಿಂಹ ಇವರ ಚಿಹ್ನೆ, ಅದು ವೆನಿಸ್‌ನ ಅಧಿಕೃತ ಹಾಗೂ ಪ್ರತಿಷ್ಟೆಯ ಚಿಹ್ನೆಯೂ ಹೌದು.




ಅಧ್ಯಾಯಗಳು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ