ಅಧ್ಯಾಯ 4

ಮಾರ್ಕನು ಬರೆದ ಸುಸಂದೇಶಗಳು


ದೇವರ ರಾಜ್ಯವನ್ನು ಕುರಿತ ಸಾಮತಿಗಳು
(ಮತ್ತಾಯ 13:1-34; ಲೂಕ 8:4-18; 13:18,19)

1ಯೇಸುವು ಮತ್ತೊಮ್ಮೆ ಸಮುದ್ರ ತೀರದಲ್ಲಿ ಬೋಧಿಸಲಾರಂಭಿಸಿದರು. ಬಹು ಜನರು ಅವರ ಬಳಿ ಬಂದು ಸೇರಿದ್ದರಿಂದ ಅವರು ಸಮುದ್ರದಲ್ಲಿದ್ದ ಒಂದು ದೋಣಿಯನ್ನು ಹತ್ತಿ ಕುಳಿತುಕೊಂಡರು; ಜನರೆಲ್ಲರು ಸಮುದ್ರ ತೀರದ ಮೇಲಿದ್ದರು. 2ಆಗ ಯೇಸುವು ಅವರಿಗೆ ಸಾಮತಿಗಳ ಮೂಲಕ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದರು. ಬೋಧನೆಯಲ್ಲಿ ಅವರು ಹೇಳಿದ್ದು:
3ಕೇಳಿರಿ! ಬಿತ್ತುವವನು ಬಿತ್ತುವುದಕ್ಕೆ ಹೊರಟನು. 4ಬೀಜಗಳನ್ನು ಬಿತ್ತುತ್ತಿದ್ದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. 5ಇನ್ನು ಕೆಲವು ಬೀಜಗಳು ತೆಳ್ಳಗೆ ಮಣ್ಣಿದ್ದ ಬಂಡೆಯ ನೆಲದಲ್ಲಿ ಬಿದ್ದವು. ಮಣ್ಣು ಆಳವಾಗಿಲ್ಲದ ಕಾರಣ ಅವು ಬೇಗನೆ ಮೊಳೆತವು; 6ಬಿಸಿಲೇರಿದಾಗ ಅವು ಬಾಡಿ, ಬೇರಿಲ್ಲದ ಕಾರಣ ಒಣಗಿಹೋದವು. 7ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಿರುವ ನೆಲದಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅದುಮಿ ಬಿಟ್ಟಿದ್ದರಿಂದ ಅವು ಫಲಕೊಡದೆ ಹೋದವು. 8ಇನ್ನೂ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತವು; ಅವು ಬೆಳೆಯುತ್ತಾ, ಕೆಲವು ಮೂವತ್ತರಷ್ಟು, ಕೆಲವು ಅರುವತ್ತರಷ್ಟು, ಮತ್ತೆ ಕೆಲವು ನೂರರಷ್ಟು 9ಫಲವನ್ನು ಕೊಟ್ಟವು,”
ಎಂದು ಹೇಳಿ,
ಕೇಳಲು ಕಿವಿಯಿರುವವನು ಕೇಳಲಿ,”
ಎಂದರು.
10ಯೇಸುವು ಒಬ್ಬರೇ ಇದ್ದಾಗ, ಹನ್ನೆರಡು ಮಂದಿ ಶಿಷ್ಯರ ಜೊತೆಗೆ ಅವರ ಬಳಿಯಿದ್ದ ಕೆಲವರು ಸಾಮತಿಗಳ ವಿಷಯವಾಗಿ ಯೇಸುವನ್ನು ಕೇಳಿದರು. 11ಆಗ ಅವರು ಅಲ್ಲಿದ್ದವರಿಗೆ,
ದೇವರ ರಾಜ್ಯದ ರಹಸ್ಯವು ನಿಮಗೆ ಕೊಡಲ್ಪಟ್ಟಿದೆ, ಆದರೆ ಹೊರಗಿನವರಿಗೆ ಎಲ್ಲ ವಿಷಯಗಳು ಸಾಮತಿಗಳಾಗಿಯೇ ಉಳಿಯುತ್ತವೆ; 12ಅವರು ಕಣ್ಣಿದ್ದು ನೋಡಿದರೂ ಕಾಣಬಾರದು, ಕಿವಿಯಿದ್ದು ಕೇಳಿದರೂ ತಿಳಿಯಬಾರದು ಹಾಗೊಮ್ಮೆ ಕಂಡು ತಿಳಿದುಕೊಂಡರೂ ಅವರೆಂದೂ ದೇವರ ಕಡೆಗೆ ತಿರುಗಿಕೊಂಡು ಪಾಪಕ್ಷಮೆಯನ್ನು ಹೊಂದಲಾರರು,”
ಎಂದರು. 13ಅನಂತರ ಯೇಸುವು ಅವರಿಗೆ,
ಸಾಮತಿಯ ಅರ್ಥ ನಿಮಗೆ ಅರ್ಥವಾಗಲಿಲ್ಲವೇ? ಹಾಗಾದರೆ ನನ್ನ ಬೇರೆಲ್ಲ ಸಾಮತಿಗಳನ್ನು ನೀವು ಹೇಗೆ ಅರ್ಥಮಾಡಿಕೊಳ್ಳುವಿರಿ? 14 ಬಿತ್ತುವವನು ವಾಕ್ಯವೆಂಬ ಬೀಜವನ್ನು ಬಿತ್ತುತ್ತಾನೆ. 15ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಅಲ್ಲಿಗೆ ಬಂದು ಬಿತ್ತಲ್ಪಟ್ಟಿರುವ ವಾಕ್ಯವನ್ನು ತೆಗೆದುಬಿಡುತ್ತಾನೆ. ಇವರೇ ವಾಕ್ಯವು ಬಿತ್ತಲ್ಪಟ್ಟ ದಾರಿಯ ಮಗ್ಗುಲು. 16ಇನ್ನು ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ. 17ಆದರೆ ತಮ್ಮಲ್ಲಿ ಬೇರಿಲ್ಲದ ಕಾರಣ ಅವರು ಸ್ವಲ್ಪಕಾಲ ಮಾತ್ರವೇ ಇದ್ದು ಬಳಿಕ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ, ಹಿಂಸೆಯಾಗಲಿ ಅನುಭವಿಸುವ ಸಮಯ ಬಂದಾಗ ಎಡವಿಬೀಳುತ್ತಾರೆ; ಇವರೇ ಬೀಜ ಬಿದ್ದ ಬಂಡೆಯ ನೆಲದಂತಿರುವವರು. 18ಇನ್ನು ಕೆಲವರು ವಾಕ್ಯವನ್ನು ಕೇಳಿಸಿಕೊಳ್ಳುತ್ತಾರಾದರೂ, 19ಜಗದ ಚಿಂತೆಗಳು, ಐಶ್ವರ್ಯದಿಂದುಂಟಾಗುವ ಮೋಸವೂ, ಇತರ ವಿಷಯಗಳ ಮೇಲಣ ಆಸೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸಿಬಿಡುವುದರಿಂದ ಫಲವನ್ನು ಕೊಡದೇ ಹೋಗುತ್ತಾರೆ. ಇವರೇ ವಾಕ್ಯವು ಬಿತ್ತಲ್ಪಟ್ಟಿರುವ ಮುಳ್ಳುಗಿಡಗಳಿರುವ ನೆಲ. 20ಮತ್ತೆ ಕೆಲವರು ವಾಕ್ಯವು ಬಿತ್ತಲ್ಪಟ್ಟಿರುವ ಒಳ್ಳೆಯ ನೆಲದಂತಿರುವವರು, ವಾಕ್ಯಕ್ಕೆ ಕಿವಿಗೊಟ್ಟು ಅದನ್ನು ಅಂಗೀಕರಿಸಿ ಮೂವತ್ತರಷ್ಟು, ಅರುವತ್ತರಷ್ಟು, ನೂರರಷ್ಟು ಫಲವನ್ನು ಕೊಡುತ್ತಾರೆ,”
21ದೀಪವನ್ನು ಹಚ್ಚಿ ಕೊಳಗದೊಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೆ? ಅದನ್ನು ತಂದು ದೀಪಸ್ತಂಭದ ಮೇಲೆ ಇಡುತ್ತಾರಲ್ಲವೆ? 22ಬೆಳಕಿಗೆ ಬರುವ ಉದ್ದೇಶಕ್ಕಲ್ಲದೇ ಯಾವುದನ್ನೂ ಮರೆಯಾಗಿ ಇಡುವುದಿಲ್ಲ; ಯಾವುದೇ ಆಗಲಿ ಬಯಲಿಗೆ ಬರಬೇಕೇ ಹೊರತು ಗುಟ್ಟಾಗಿ ಇರುವುದಿಲ್ಲ. 23ಕೇಳುವುದಕ್ಕೆ ಕಿವಿಯಿರುವವನು ಕೇಳಲಿ,”
ಎಂದು ಹೇಳಿದರು.
24ಅನಂತರ ಯೇಸು ಅವರಿಗೆ ಹೇಳಿದ್ದು:
ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ನೀವು ಅಳೆಯುತ್ತಿರುವ ಅಳತೆಯಿಂದಲೇ ನಿಮಗೂ ಅಳೆಯುವರು ಮತ್ತು ನಿಮಗೆ ಇನ್ನೂ ಹೆಚ್ಚಿಗೆ ಕೂಡಿಸಿ ಕೊಡಲಾಗುವುದು. 25ಇದ್ದವನಿಗೆ ಹೆಚ್ಚು ಕೊಡಲ್ಪಡುವುದು; ಆದರೆ ಇಲ್ಲದವನಿಂದ ಇದ್ದುದನ್ನೂ ತೆಗೆದುಕೊಳ್ಳಲಾಗುವುದು.”
ಎಂದರು.
26ಯೇಸುವು ಇನ್ನೂ ಅವರಿಗೆ ಹೇಳಿದ್ದು,
ಒಬ್ಬನು ಭೂಮಿಯಲ್ಲಿ ಬೀಜವನ್ನು ಬಿತ್ತಿದ ಬಳಿಕ ರಾತ್ರಿ ಮಲಗಿರುತ್ತಾ, ಹಗಲು ಎದ್ದಿರುತ್ತಾ ಇರಲು, 27ಅವನಿಗೆ ತಿಳಿಯದ ರೀತಿಯಲ್ಲಿ ಬೀಜವು ಮೊಳೆತು ಬೆಳೆಯುವುದು. 28ಭೂಮಿಯು ಮೊದಲು ಗರಿಕೆಯನ್ನೂ, ಬಳಿಕ ತೆನೆಯನ್ನೂ ತರುವಾಯ ತೆನೆಯ ತುಂಬ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ. 29ಆದರೆ ಫಲಮಾಗಿದ ಕೂಡಲೆ, ಅವನು ಸುಗ್ಗಿಕಾಲ ಬಂತೆಂದು ಕೊಯಿಸುತ್ತಾನೆ,”
ಎಂದರು.
30ಇನ್ನೂ ಯೇಸುವು ಅವರಿಗೆ,
ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ? ಯಾವ ಸಾಮತಿಯಿಂದ ಅದನ್ನು ತೋರಿಸಿಕೊಡೋಣ? 31ಅದು ಸಾಸಿವೆ ಕಾಳಿನಂತಿರುತ್ತದೆ. ಭೂಮಿಯಲ್ಲಿ ಬಿತ್ತುವಾಗ ಅದು ಭೂಮಿಯ ಮೇಲಿರುವ ಎಲ್ಲ ಬೀಜಗಳಿಗಿಂತ ಅತಿ ಚಿಕ್ಕದಾಗಿರುತ್ತದೆ. 32ಬಿತ್ತಿದ ಬಳಿಕ ಅದು ಬೆಳೆದು ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಬೆಳೆದು ದೊಡ್ಡದೊಡ್ಡ ಕೊಂಬೆಗಳನ್ನು ಬಿಡುತ್ತದೆ. ಆಕಾಶದ ಹಕ್ಕಿಗಳು ಅದರ ನೆರಳಿನಲ್ಲಿ ಆಶ್ರಯವನ್ನು ಪಡೆಯಲು ಸಾಧ್ಯವಾಗುತ್ತದೆ.”
33   ರೀತಿಯ ಅನೇಕ ಸಾಮತಿಗಳಿಂದ ಯೇಸುವು, ಅವರು ಗ್ರಹಿಸಲು ಸಾಧ್ಯವಾಗುವ ಹಾಗೆ ದೇವರ ವಾಕ್ಯವನ್ನು ಅವರಿಗೆ ಬೋಧಿಸುತ್ತಿದ್ದರು. 34  ಸಾಮತಿಯಿಲ್ಲದೆ ಅವರಿಗೇನನ್ನೂ ಹೇಳಲಿಲ್ಲ. ಆದರೆ ಪ್ರತ್ಯೇಕವಾಗಿದ್ದಾಗ ಅವರು ತಮ್ಮ ಶಿಷ್ಯರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.


ಯೇಸು ಸಮುದ್ರದ ಮೇಲಿನ ಬಿರುಗಾಳಿಯನ್ನು ನಿಲ್ಲಿಸಿದ್ದು
(ಮತ್ತಾಯ 8:23-27; ಲೂಕ 8:22-25)

35 ದಿನ ಸಂಜೆಯಾದಾಗ ಯೇಸುವು ಅವರಿಗೆ, ಆಚೆಯ ದಡಕ್ಕೆ ಹೋಗೋಣ ಎಂದು ಹೇಳಲು, 36ಅವರು ಜನರ ಗುಂಪನ್ನು ಬಿಟ್ಟು ಯೇಸುವನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡುಹೋದರು. ಬೇರೆ ದೋಣಿಗಳು ಸಹ ಅದರ ಸಂಗಡ ಇದ್ದವು. 37ಆಗ ಭೀಕರ ಬಿರುಗಾಳಿಯು ಎದ್ದು ತೆರೆಗಳು ದೋಣಿಗೆ ಬಡಿದು ಒಳಕ್ಕೆ ನುಗ್ಗಿದ್ದರಿಂದಾಗಿ ದೋಣಿ ಆಗಲೇ ನೀರಿನಿಂದ ತುಂಬತೊಡಗಿತು. 38ಯೇಸುವು ದೋಣಿಯ ಹಿಂಭಾಗದಲ್ಲಿ ತಲೆದಿಂಬನ್ನು ಒರಗಿ ನಿದ್ರಿಸುತ್ತಿದ್ದರು. ಶಿಷ್ಯರು ಅವರನ್ನು ಎಬ್ಬಿಸಿ,
ಗುರುವೇ, ನಾವು ಮುಳುಗಿ ಹೋಗುತ್ತೇವೆಂಬ ಚಿಂತೆ ನಿಮಗಿಲ್ಲವೆ?”
ಎಂದು ಕೇಳಿದರು. 39ಆಗ ಯೇಸುವು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ,
ಮೊರೆಯಬೇಡ
ಎಂದು ಆದೇಶಿಸಿದರು. ಕೂಡಲೇ ಬಿರುಗಾಳಿಯು ನಿಂತು ಹೋಗಿ ಎಲ್ಲವೂ ಶಾಂತವಾಯಿತು. 40ಅನಂತರ ಯೇಸುವು ಅವರಿಗೆ,
ಯಾಕೆ ಭಯಪಡುತ್ತೀರಿ? ನಿಮಗೆ ಇನ್ನೂ ನಂಬಿಕೆ ಬರಲಿಲ್ಲವೆ?”
ಎಂದು ಕೇಳಿದಾಗ, 41ಅವರು ಬಹು ಭಯಪಟ್ಟು,
ಇವರು ನಿಜವಾಗಿಯೂ ಯಾರು? ಗಾಳಿಯೂ, ಸಮುದ್ರವೂ ಇವರ ಮಾತುಗಳನ್ನು ಪಾಲಿಸುತ್ತವಲ್ಲಾ?”
ಎಂದು ತಮ್ಮೊಳಗೆ ಮಾತನಾಡಿಕೊಂಡರು.  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ