ಮಾರ್ಕನು ಬರೆದ ಸುಸಂದೇಶಗಳು
ರೋಗ ಗುಣಪಡಿಸಿದ ಯೇಸುವಿಗೆ ಧರ್ಮಶಾಸ್ತ್ರಿಗಳ
ಆಕ್ಷೇಪಣೆ
(ಮತ್ತಾಯ 9:1-8; ಲೂಕ 5:17-26)
1ಆದರೂ, ಕೆಲವು ದಿನಗಳು ಕಳೆದ ಬಳಿಕ ಯೇಸುವು ಪುನಃ ಕಪೆರ್ನೌಮಿಗೆ ಬಂದರು. ಅವರು ಮನೆಯಲ್ಲಿದ್ದಾರೆಂಬ ಸುದ್ದಿಯು ಎಲ್ಲೆಡೆ ಹಬ್ಬಿತು. 2ಜನರು ಗುಂಪುಗಳಾಗಿ ಅಲ್ಲಿಗೆ ಬಂದು ಸೇರತೊಡಗಿದರು. ಅಲ್ಲಿ ನಿಲ್ಲಲು ಸ್ಥಳವಿಲ್ಲದಂತಾಯಿತು. ಆದರೂ ಯೇಸುವು ಅಲ್ಲಿ ನೆರೆದವರಿಗೆ ಬೋಧಿಸಲಾರಂಭಿಸಿದರು. 3ಆಗ ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರು ಹೊತ್ತು ಅಲ್ಲಿಗೆ ಬಂದರು. 4ಅಲ್ಲಿ ಅಧಿಕ ಜನರು ಸೇರಿದ್ದ ಕಾರಣ ಅವನನ್ನು ಯೇಸುವಿನ ಹತ್ತಿರ ತೆಗದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅವರು ಯೇಸುವಿದ್ದೆಡೆಯ ಮನೆಯ ಮೇಲ್ಚಾವಣಿಯನ್ನು ತೆರೆದು, ಪಾರ್ಶ್ವವಾಯು ರೋಗಿಯನ್ನು ಅವನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು.
5ಯೇಸುವು ಅವರ ನಂಬಿಕೆಯನ್ನು ನೋಡಿ, ಆ ಪಾರ್ಶ್ವವಾಯು ರೋಗಿಗೆ,
“ಮಗನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ”
ಎಂದರು.
6ಆದರೆ ಅಲ್ಲಿ ಕುಳಿತುಕೊಂಡಿದ್ದ ಕೆಲವು ಧರ್ಮಶಾಸ್ತ್ರಿಗಳು,
7“ಈತ ಹೀಗೇಕೆ ಮಾತನಾಡುತ್ತಿದ್ದಾನೆ? ಇವನು ಮಾಡುತ್ತಿರುವುದು ದೇವದೂಷಣೆಯಲ್ಲವೇ? ದೇವರೊಬ್ಬರ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು?”
ಎಂದು ತಮ್ಮ ತಮ್ಮ ಮನಸ್ಸಿನಲ್ಲಿಯೇ ಅಂದುಕೊಂಡರು. 8ಅವರು ಹೀಗೆ ಅಂದುಕೊಳ್ಳುತ್ತಿರುವುದನ್ನು ಯೇಸು ಕೂಡಲೆ ಗ್ರಹಿಸಿಕೊಂಡು ಅವರಿಗೆ,
“ನೀವು ನಿಮ್ಮ ಮನಸ್ಸಿನಲ್ಲಿ
ಹೀಗೇಕೆ ಆಲೋಚಿಸುತ್ತಿರುವಿರಿ? 9ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವು ಸುಲುಭವೋ, ಇಲ್ಲ ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ ಎಂದು ಹೇಳುವುದು ಸುಲುಭವೋ? 10ಆದರೆ ಪಾಪಗಳನ್ನು ಕ್ಷಮಿಸುವುದಕ್ಕೆ ನರಪುತ್ರನಿಗೆ ಅಧಿಕಾರವಿದೆ ಎಂದು ನಿಮಗೆ ತಿಳಿದಿರಲಿ,”
ಎಂದು ಹೇಳಿ ಯೇಸುವು ಪಾರ್ಶ್ವವಾಯು ರೋಗಿಗೆ,
11“ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,”
ಎಂದರು. 12ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ಎತ್ತಿಕೊಂಡು ಅವರೆಲ್ಲರ ಮುಂದಿನಿಂದ ಹೊರಟುಹೋದನು.
ಆಗ ನೆರೆದಿದ್ದವರೆಲ್ಲರೂ ಬೆರಗಾಗಿ,
“ಇದುವರೆಗೂ ಇಂಥದ್ದನ್ನು ನಾವು ನೋಡಿಯೇ ಇಲ್ಲ,”
ಎಂದು ಹೇಳುತ್ತಾ ದೇವರನ್ನು ಸ್ತುತಿಸಿ ಮಹಿಮೆಪಡಿಸಿದರು.
ಪಾಪಿಗಳ ಸಂಗಡ ಊಟ ಮಾಡಿದ ಯೇಸುವಿಗೆ ಆಕ್ಷೇಪಣೆ
(ಮತ್ತಾಯ 9:9-13; ಲೂಕ 5:27-32)
13ಯೇಸುವು ಪುನಃ ಸಮುದ್ರ ತೀರಕ್ಕೆ ಹೋದರು; ಜನರ ಗುಂಪು ಅವರ ಬಳಿಗೆ ಬರುತ್ತಾ ಇದ್ದಂತೆ ಯೇಸುವು ಅವರಿಗಾಗಿ ಬೋಧಿಸಲು ಆರಂಭಿಸಿದರು. ಬೋಧನೆಯನ್ನು ಮುಗಿಸಿ, 14ಯೇಸುವು ಅಲ್ಲಿಂದ ಹೊರಡುತ್ತಿರವಾಗ ಸುಂಕ ವಸೂಲಿಯಲ್ಲಿ ನಿರತನಾಗಿದ್ದ ಅಲ್ಫಾಯನ ಮಗ ಲೇವಿಯನ್ನು ಕಂಡು,
"ನನ್ನನ್ನು ಹಿಂಬಾಲಿಸು,"
ಎಂದರು. ಆಗ ಅವನೆದ್ದು ಯೇಸುವನ್ನು ಹಿಂಬಾಲಿಸಿದನು. 15ಅನಂತರ ಅವನ ಮನೆಯಲ್ಲಿ ಯೇಸುವು ಊಟಕ್ಕೆ ಕುಳಿತಿದ್ದಾಗ, ಅನೇಕ ಮಂದಿ ತೆರಿಗೆ ವಸೂಲಿಮಾಡುವವರೂ, ಪಾಪಿಗಳೂ ಯೇಸುವಿನ ಮತ್ತು ಅವರ ಶಿಷ್ಯರ ಜೊತೆಯಲ್ಲೇ ಕುಳಿತುಕೊಂಡರು. ಅಂಥವರು ಬಹಳ ಮಂದಿ ಇದ್ದರು. 16ಆದರೆ ಫರಿಸಾಯರಾದ ಧರ್ಮಶಾಸ್ತ್ರಿಗಳು ಯೇಸುವು ಪಾಪಿಗಳ ಮತ್ತು ತೆರಿಗೆ ವಸೂಲಿಮಾಡುವವರ ಸಂಗಡ ಊಟಮಾಡುತ್ತಿರುವುದನ್ನು ಕಂಡು,
“ಈತನು ತೆರಿಗೆ ವಸೂಲಿಮಾಡುವವರ ಮತ್ತು ಪಾಪಿಗಳ ಸಂಗಡ ಊಟಮಾಡುತ್ತಾನಲ್ಲಾ,”
ಎಂದು ಯೇಸುವಿನ ಶಿಷ್ಯರಿಗೆ ಹೇಳಿದರು.
17ಇದನ್ನು ಕೇಳಿ ಯೇಸುವು ಅವರಿಗೆ,
“ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆಯಿರುವುದಿಲ್ಲ, ಆದರೆ ರೋಗಿಗಳಿಗೆ ಇದೆ. ನಾನು ಕರೆಯಲು ಬಂದಿದ್ದು ನೀತಿವಂತರನ್ನಲ್ಲ, ಪಾಪಿಗಳನ್ನು!”
ಎಂದರು.
ಉಪವಾಸ ಮಾಡದ ಶಿಷ್ಯರ ನಡತೆಗೆ ಯೇಸುವಿನ ಮೇಲೆ
ಆಕ್ಷೇಪಣೆ
(ಮತ್ತಾಯ 9:14-17; ಲೂಕ 5:31-38)
18ಉಪವಾಸದ ದಿನಗಳಲ್ಲಿ ಸ್ನಾನಿಕ ಯೊವಾನ್ನನ ಶಿಷ್ಯರೂ, ಫರಿಸಾಯರೂ ಉಪವಾಸವನ್ನು ಆಚರಿಸುತ್ತಿದ್ದರು. ಆದರೆ ಯೇಸುವಿನ ಶಿಷ್ಯರು ಉಪವಾಸ ಮಾಡದ್ದನ್ನು ಗಮನಿಸಿದ ಫರಿಸಾಯರು ಯೇಸುವಿನ ಬಳಿ ಬಂದು,
“ಯೊವಾನ್ನನ ಶಿಷ್ಯರೂ, ಫರಿಸಾಯರ ಶಿಷ್ಯರೂ ಉಪವಾಸವನ್ನು ಆಚರಿಸುತ್ತಾರೆ, ಆದರೆ ನಿನ್ನ ಶಿಷ್ಯರು ಏಕೆ ಆಚರಿಸುವುದಿಲ್ಲ?”
ಎಂದು ಕೇಳಿದರು.
19 ಅದಕ್ಕೆ ಯೇಸುವು ಅವರಿಗೆ,
“ಮದುಮಗನು ತಮ್ಮೊಂದಿಗಿರುವಾಗ ಅವನ ಸ್ನೇಹಿತರು ಉಪವಾಸಮಾಡಲಾರರು, ಮದುಮಗನು ಅವರೊಂದಿಗಿರುವಷ್ಟು ಸಮಯವೂ ಅವರು ಉಪವಾಸಮಾಡಲಾಗದು. 20ಆದರೆ ಮದುಮಗನನ್ನು ಅವರ ಬಳಿಯಿಂದ ತೆಗೆದುಕೊಂಡುಹೋಗುವ ದಿನಗಳು ಬರುವವು. ಆ ದಿನಗಳಲ್ಲಿ ಅವರು ಉಪವಾಸಮಾಡುವರು. 21ಯಾರೂ ಹಳೆಯ ಮೇಲಂಗಿಗೆ ಹೊಸ ಬಟ್ಟೆಯ ತುಂಡಿನಿಂದ ತೇಪೆಯನ್ನು ಹಾಕುವುದಿಲ್ಲ; ಹಾಗೆ ಮಾಡಿದರೆ ಆ ಹೊಸ ಬಟ್ಟೆಯು ಹಳೆಯ ಬಟ್ಟೆಯನ್ನು ಹಿಂಜುವುದರಿಂದ ಹರಿದ ಭಾಗವು ಇನ್ನೂ ದೊಡ್ಡದಾಗುವುದು. 22ಮಾತ್ರವಲ್ಲ,
ಯಾರೂ ಹೊಸ ದ್ರಾಕ್ಷಾರಸವನ್ನು ಹಳೆಯ ಬುದ್ದಲಿಗಳಲ್ಲಿ ತುಂಬಿಡುವುದಿಲ್ಲ; ತುಂಬಿದರೆ ಹೊಸ ದ್ರಾಕ್ಷಾರಸವು ಹಳೆಯ ಬುದ್ದಲಿಗಳನ್ನು ಒಡೆದು ದ್ರಾಕ್ಷಾರಸವೂ ಮತ್ತು ಚರ್ಮದ ಚೀಲಗಳೂ ನಷ್ಟವಾಗುತ್ತವೆ. ಆದರೆ ಜನರು ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ,”
ಎಂದು ಹೇಳಿದರು.
ಸಬ್ಬತ್ ದಿನದ ಅಲಕ್ಷ್ಯ ಮಾಡಿದ್ದಕ್ಕೆ
ಯೇಸುವಿನ ಮೇಲೆ ಆಕ್ಷೇಪಣೆ
(ಮತ್ತಾಯ 12:1-14; ಲೂಕ 6:1-11)
23ಒಂದು ಸಬ್ಬತ್ ದಿನದಂದು ಯೇಸುವು ಗೋದಿಯ ಹೊಲಗಳ ಮೂಲಕ ಹಾದುಹೋಗುತ್ತಿರುವಾಗ, ಅವರ ಶಿಷ್ಯರು ನಡೆಯುತ್ತಾ ತೆನೆಗಳನ್ನು ಕೀಳುತ್ತಿದ್ದುದನ್ನು ಫರಿಸಾಯರು ಕಂಡರು. 24ಆಗ ಫರಿಸಾಯರು ಯೇಸುವಿಗೆ,
“ನೋಡು! ಇವರು ಸಬ್ಬತ್ ದಿನದಲ್ಲಿ ಧರ್ಮಸಮ್ಮತವಲ್ಲದ ಕೆಲಸವನ್ನು ಏಕೆ ಮಾಡುತ್ತಿದ್ದಾರೆ?,”
ಎಂದು ಕೇಳಿದರು.
25ಆಗ ಯೇಸುವು ಅವರಿಗೆ,
“ದಾವೀದನು ತಮ್ಮ ಸಂಗಡಿಗರೊಂದಿಗೆ ಹಸಿದಿದ್ದು ಏನೂ ತಿನ್ನಲು ಇಲ್ಲದಿದ್ದಾಗ ಅವನೇನು ಮಾಡಿದನೆಂಬುದನ್ನು ನೀವು ಓದಲಿಲ್ಲವೇ? 26ಮುಖ್ಯ ಯಾಜಕನಾದ ಅಬಿಯಾತರನ ಕಾಲದಲ್ಲಿ ಅವನು ದೇವಾಲಯವನ್ನು ಪ್ರವೇಶಿಸಿ ಯಾಜಕರ ಹೊರತು ಬೇರೆ ಯಾರೂ ತಿನ್ನಲು ಅನುಮತಿಯಿಲ್ಲದ ನೈವೇದ್ಯದ
ರೊಟ್ಟಿಗಳನ್ನು ತಿಂದು, ತನ್ನ ಸಂಗಡಿರಿಗೂ ನೀಡಿದನಲ್ಲಾ?,”
ಎಂದರು.
27ಅನಂತರ,
“ಮನುಷ್ಯನು ಸಬ್ಬತ್ತಿಗಾಗಿ ಅಲ್ಲ, ಸಬ್ಬತ್ತು ಮನುಷ್ಯನಿಗಾಗಿ ಅಸ್ತಿತ್ವಕ್ಕೆ ಬಂತು; 28ಆದುದರಿಂದ
ನರಪುತ್ರನು ಸಬ್ಬತ್ತಿಗೂ ಸಹ ಒಡೆಯನಾಗಿದ್ದಾನೆ,” ಎಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ