ಅಧ್ಯಾಯ 11

ಮಾರ್ಕನು ಬರೆದ ಸುಸಂದೇಶಗಳು



ಅರಸರಂತೆ ಜೆರುಸಲೇಂಗೆ ಯೇಸುವಿನ ಪ್ರವೇಶ
(ಮತ್ತಾಯ 21:1-9; ಲೂಕ 19:29-38; ಯೊವಾನ್ನ 12:12-16)

1ಅವರು ಜೆರುಸಲೇಮಿಗೆ ಸಮೀಪವಾಗಿ ಓಲಿವ್ಮರಗಳ ಗುಡ್ಡದ ಬಳಿ ಇರುವ ಬೇತ್ಫಗೆಗೂ, ಬೇಥಾನಿಗೂ ಬಂದ ನಂತರ ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು ಅವರಿಗೆ,
2"ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ; ನೀವು ಅದರೊಳಕ್ಕೆ ಪ್ರವೇಶಿಸುತ್ತಲೇ ಅಲ್ಲಿ ಯಾರು ಎಂದಿಗೂ ಕುಳಿತುಕೊಳ್ಳದ ಒಂದು ಕತ್ತೆಮರಿಯನ್ನು ಕಾಣುವಿರಿ; ಅದನ್ನು ಬಿಚ್ಚಿ ತನ್ನಿರಿ. 3ಯಾರಾದರೂ ನಿಮಗೆ, 'ನೀವೇಕೆ ಇದನ್ನು ತೆಗದುಕೊಂಡು ಹೋಗುತ್ತಿರುವಿರಿ?' ಎಂದು ಕೇಳಿದರೆ, 'ಇದು ಪ್ರಭುವಿಗೆ ಬೇಕಾಗಿದೆ,' ಎಂದು ಹೇಳಿರಿ; ಆಗ ಕೂಡಲೆ ಅವರು ನಿಮ್ಮನ್ನು ಅದರೊಂದಿಗೆ ಕಳುಹಿಸಿಬಿಡುವರು,"
ಎಂದು ಹೇಳಿದರು. 4ಆಗ ಅವರು ಹೊರಟು ಹೋಗಿ ಎರಡು ದಾರಿಗಳು ಸೇರುವ ಸ್ಥಳದಲ್ಲಿನ ಮನೆಯ ಹೊರಗೆ ಬಾಗಿಲಿನ ಬಳಿಯಲ್ಲಿ ಕಟ್ಟಿದ್ದ ಕತ್ತೆಮರಿಯನ್ನು ಬಿಚ್ಚುತ್ತಿರುವಾಗ 5ಅಲ್ಲಿ ನಿಂತವರಲ್ಲಿ ಕೆಲವರು ಅವರಿಗೆ,
" ಕತ್ತೆಮರಿಯನ್ನು ಏನು ಮಾಡುತ್ತಿರುವಿರಿ?"
ಎಂದು ಕೇಳಿದರು. 6ಅದಕ್ಕೆ ಅವರು ಯೇಸುವು ಹೇಳಿಕೊಟ್ಟಂತೆಯೇ ಹೇಳಿದರು. ಆಗ ಅಲ್ಲಿದ್ದವರು ಅವರಿಗೆ ಹೋಗಲು ಬಿಟ್ಟರು. 7ಅವರು ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ಅದರ ಮೇಲೆ ತಮ್ಮ ವಸ್ತ್ರಗಳನ್ನು ಹಾಕಿದಾಗ ಯೇಸುವು ಅದರ ಮೇಲೆ ಕುಳಿತುಕೊಂಡರು. 8ಆಗ ಅನೇಕರು ತಮ್ಮ ವಸ್ತ್ರಗಳನ್ನು ದಾರಿಯಲ್ಲಿ ಹಾಸಿದರು; ಇತರರು ಮರಗಳಿಂದ ಚಿಗುರೆಲೆಯ ಕೊಂಬೆಗಳನ್ನು ಕಡಿದು ದಾರಿಯಲ್ಲಿ ಹಾಕಿದರು. 9ಆಗ ಯೇಸುವಿನ ಮುಂದೆಯೂ ಹಿಂದೆಯೂ ಹೋಗುತ್ತಿದ್ದವರು ಕೂಗುತ್ತಾ,
"ಹೊಸಾನ್ನ; ಪ್ರಭುವಿನ ಹೆಸರಿನಲ್ಲಿ ಬರುವವರು ಧನ್ಯರು; 10ನಮ್ಮ ಪಿತೃವಾದ ದಾವೀದನ ರಾಜ್ಯವು ಆಶೀರ್ವದಿಸಲ್ಪಡಲಿ; ಉನ್ನತದಲ್ಲಿ ಹೊಸಾನ್ನ,"
ಎಂದು ಹೇಳಿದರು
11ಯೇಸು ಜೆರುಸಲೇಮಿಗೆ ಬಂದು ದೇವಾಲಯದೊಳಕ್ಕೆ ಪ್ರವೇಶಿಸಿ ಸುತ್ತಲೂ ಎಲ್ಲವನ್ನು ನೋಡಿ; ಸಂಜೆಯಾಗುತ್ತಲೇ ತಮ್ಮ ಹನ್ನೆರಡು ಮಂದಿ ಶಿಷ್ಯರೊಂದಿಗೆ ಬೇಥಾನಿಗೆ ಹೊರಟುಹೋದರು

ಅಂಜೂರದ ಮರವನ್ನು ಯೇಸು ಶಪಿಸಿದ್ದು; ದೇವಾಲಯದ ವ್ಯಾಪಾರಿಗಳನ್ನು ಯೇಸುವು ಅಟ್ಟಿದ್ದು
(ಮತ್ತಾಯ 21:12-22; ಲೂಕ 19:45-48)

12ಮರುದಿವಸ ಅವರು ಬೇಥಾನಿಯಿಂದ ಹಿಂದಿರುಗಿ ಬರುತ್ತಿದ್ದಾಗ ಹಸಿದಿದ್ದರು; 13ಅವರು ಎಲೆಗಳಿಂದ ತುಂಬಿದ್ದ ಒಂದು ಅಂಜೂರದ ಮರವನ್ನು ದೂರದಿಂದಲೇ ನೋಡಿ ತಮಗೆ ಅದರಲ್ಲಿ ಏನಾದರೂ ಸಿಗಬಹುದೆಂದು ಅಲ್ಲಿಗೆ ಬಂದರು; ಆದರೆ ಅದರ ಬಳಿಗೆ ಬಂದಾಗ ಎಲೆಗಳ ಹೊರತು ಮತ್ತೇನೂ ಅದರಲ್ಲಿ ಕಾಣಲಿಲ್ಲ; ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ. 14ಯೇಸು ಮರಕ್ಕೆ,
"ಇನ್ನೆಂದಿಗೂ ಯಾರೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ,"
ಎಂದರು. ಯೇಸುವಿನ ಶಿಷ್ಯರು ಅದನ್ನು ಕೇಳಿಸಿಕೊಂಡರು
15ಅವರು ಜೆರುಸಲೇಮಿಗೆ ಬಂದಾಗ ದೇವಾಲಯದೊಳಕ್ಕೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ, ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಿ, ಹಣ ಬದಲಾಯಿಸುವವರ ಮೇಜುಗಳನ್ನೂ, ಪಾರಿವಾಳಗಳನ್ನು ಮಾರುತ್ತಿದ್ದವರ ಪೀಠಗಳನ್ನೂ ಕೆಡವಿಹಾಕಿದರು. 16ಯಾರನ್ನೂ ಸಾಮಾನುಗಳನ್ನು ಹೊತ್ತುಕೊಂಡು ದೇವಾಲಯದ ಮಾರ್ಗವಾಗಿ ಹೋಗಲು ಬಿಡಲಿಲ್ಲ. 17ಯೇಸುವು ಅಲ್ಲಿದ್ದವರಿಗೆ ಉಪದೇಶಿಸುತ್ತಾ,
"ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವುದೆಂದು ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ,"
ಎಂದು ಹೇಳಿದರು. 18ಆಗ ಧರ್ಮಶಾಸ್ತ್ರಿಗಳೂ, ಪ್ರಧಾನಯಾಜಕರೂ ಅದನ್ನು ಕೇಳಿ ಯೇಸುವನ್ನು ಹೇಗೆ ಕೊಲ್ಲುವುದೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಅವರ ಬೋಧನೆಗೆ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಯೇಸುವಿಗೆ ಭಯಪಟ್ಟರು
19ಪ್ರತಿ ಸಂಜೆ ಯೇಸುವೂ ಆತನ ಶಿಷ್ಯರು ಪಟ್ಟಣವನ್ನು ಬಿಟ್ಟು ಹೊರಹೋಗುತ್ತಿದ್ದರು. 20ಬೆಳಿಗ್ಗೆ ಅವರು ದಾರಿಯಲ್ಲಿ ಹೋಗುತ್ತಿದ್ದಾಗ ಅಂಜೂರದ ಮರವು ಬೇರು ಸಹಿತವಾಗಿ ಒಣಗಿರುವುದನ್ನು ಕಂಡರು. 21ಆಗ ಪೇತ್ರನು ಹಿಂದಿನ ದಿನದ ಘಟನೆಯನ್ನು ನೆನಪು ಮಾಡಿಕೊಂಡು ಯೇಸುವಿಗೆ,
"ಗುರುವೇ, ನೀವು ಶಪಿಸಿದಂತೆಯೇ ಅಂಜೂರದ ಮರವು ಒಣಗಿಹೋಗಿದೆ,"
ಎಂದನು. 22ಯೇಸು ಪ್ರತ್ಯುತ್ತರವಾಗಿ ಅವರಿಗೆ ಹೇಳಿದ್ದೇನೆಂದರೆ,
"ದೇವರಲ್ಲಿ ನಂಬಿಕೆ ಇಡಿರಿ. 23ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರು ಬೇಕಾದರೂ ಬೆಟ್ಟವನ್ನು, ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು ಎಂದು ಯಾವ ಸಂಶಯವನ್ನೂ ಪಡದೆ ನಂಬಿಕೆಯಿಂದ ಹೇಳಿದರೆ ಅವನು ಹೇಳಿದಂತೆಯೇ ಆಗುವುದು. 24ಆದ ಕಾರಣ ನಾನು ನಿಮಗೆ ಹೇಳುವುದೇನೆಂದರೆ, ನೀವು ಪ್ರಾರ್ಥಿಸುವಾಗ ಏನೇನನ್ನೂ ಆಶಿಸುತ್ತೀರೋ ಅವು ನಿಮಗೆ ಸಿಗುವವೆಂದು ನಂಬಿರಿ; ಅವುಗಳನ್ನು ನೀವು ಹೊಂದುವಿರಿ. 25ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರ ಮೇಲಾದರೂ ವಿರೋಧವಿದ್ದರೆ ಅವನನ್ನು ಕ್ಷಮಿಸಿರಿ; ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವರು. 26ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಅಪರಾಧಗಳನ್ನು ಕ್ಷಮಿಸುವುದಿಲ್ಲ.” 

ಧರ್ಮಶಾಸ್ತ್ರಿಗಳ ಪ್ರಶ್ನೆಗೆ ಯೇಸುವಿನ ಉತ್ತರ
(ಮತ್ತಾಯ 21:23-46; ಲೂಕ 20:1-19)

27ಯೇಸುವು ಪುನಃ ಜೆರುಸಲೇಮಿಗೆ ಬಂದು ದೇವಾಲಯದಲ್ಲಿ ತಿರುಗಾಡುತ್ತಿರುವಾಗ ಪ್ರಧಾನ ಯಾಜಕರೂ, ಧರ್ಮಶಾಸ್ತ್ರಿಗಳೂ, ಪಟ್ಟಣದ ಹಿರಿಯರೂ ಅವರ ಬಳಿಗೆ ಬಂದು,
28"ನೀನು ಯಾವ ಅಧಿಕಾರದಿಂದ ಇವುಗಳನ್ನು ಮಾಡುವೆ? ಇವುಗಳನ್ನು ಮಾಡುವುದಕ್ಕೆ ನಿನಗೆ ಅಧಿಕಾರ ಕೊಟ್ಟವರು ಯಾರು?"
ಎಂದು ಪ್ರಶ್ನಿಸಿದರು. 29ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಅವರಿಗೆ,
"ನಾನು ಸಹ ಒಂದು ಪ್ರಶ್ನೆಯನ್ನು ನಿಮಗೆ ಕೇಳುತ್ತೇನೆ, ನನಗೆ ಉತ್ತರಕೊಡಿರಿ; ಆಗ ಯಾವ ಅಧಿಕಾರದಿಂದ ನಾನು ಇವುಗಳನ್ನು ಮಾಡುತ್ತಿರುವೆನೆಂದೂ ನಿಮಗೆ ಹೇಳುತ್ತೇನೆ. 30ಯೊವಾನ್ನನಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಪರಲೋಕದಿಂದ ಬಂತೋ ಇಲ್ಲವೆ ಮನುಷ್ಯರಿಂದ ಬಂತೋ, ಉತ್ತರಕೊಡಿರಿ,"
ಎಂದರು. 31ಆಗ ಅವರು, ‘ಅಧಿಕಾರವು ಪರಲೋಕದಿಂದ ಬಂತು' ಎಂದು ಹೇಳಿದರೆ, 'ನೀವೇಕೆ ಅವರನ್ನು ನಂಬಲಿಲ್ಲ,' ಎಂದು ಯೇಸುವು ಕೇಳಬಹುದು; 32 ಆದರೆ 'ಮನುಷ್ಯರಿಂದ ಅಧಿಕಾರ ಬಂತು,' ಎಂದು ಹೇಳಿದರೆ ಜನರಿಂದ ತಮಗೇನಾಗುವುದೋ ಎಂದವರು ಯೋಚಿಸಲಾರಂಭಿಸಿದರು; ಏಕೆಂದರೆ ಯೊವಾನ್ನನು ನಿಜವಾಗಿಯೂ ಪ್ರವಾದಿಯೆಂದು ಎಲ್ಲರೂ ನಂಬಿದ್ದರು. 33ಅವರು ಪ್ರತ್ಯುತ್ತರವಾಗಿ ಯೇಸುವಿಗೆ,
"ನಾವು ಹೇಳಲಾರೆವು,"
ಎಂಬ ಉತ್ತರ ಕೊಟ್ಟರು. ಅದಕ್ಕೆ ಯೇಸುವು,
"ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಾನೂ ಸಹ ನಿಮಗೆ ಹೇಳುವುದಿಲ್ಲ," ಎಂದು ಅವರಿಗೆ ಉತ್ತರ ಕೊಟ್ಟರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ