ಮಾರ್ಕನು ಬರೆದ ಸುಸಂದೇಶಗಳು
ದೆವ್ವಗಳ ದಂಡಿನಿಂದ ದೊರಕಿದ ಮುಕ್ತಿ
(ಮತ್ತಾಯ 8:28-34; ಲೂಕ
8:26-39)
1ಆ
ಮೇಲೆ ಅವರು ಸಮುದ್ರದ ಆಚೆಯ ದಡದಲ್ಲಿದ್ದ ಗೆರಸೇನರ ಸೀಮೆಯನ್ನು ತಲಪಿದರು. 2ಯೇಸುವು
ದೋಣಿಯಿಂದ ಕೆಳಗಿಳಿದ ಕೂಡಲೆ ದೆವ್ವಹಿಡಿದಿದ್ದ ಮನುಷ್ಯನೊಬ್ಬನು ಸಮಾಧಿಗಳ ಗವಿಗಳಿಂದ ಬಂದು ಅವರನ್ನು ಎದುರುಗೊಂಡನು. 3-4ಆ ಮನುಷ್ಯನು ಸಮಾಧಿಗಳ ನಡುವೆ ವಾಸಿಸುತ್ತಿದ್ದನು; ಅನೇಕ
ಸಲ ಅವನನ್ನು ಬೇಡಿಗಳಿಂದಲೂ, ಸರಪಣಿಗಳಿಂದಲೂ
ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು, ಬೇಡಿಗಳನ್ನು
ಮುರಿದು ಹಾಕಿದ್ದನು; ಅವನನ್ನು
ಸರಪಣಿಗಳಿಂದ ಕಟ್ಟಿಲು, ಹತೋಟಿಗೆ
ತರಲು ಯಾರಿಗೂ ಸಾಧ್ಯವಾಗಲಿಲ್ಲ. 5ಅವನು
ನಿತ್ಯ ರಾತ್ರಿ ಹಗಲೂ ಸಮಾಧಿಯ ಗವಿಗಳಲ್ಲಿಯೂ, ಗುಡ್ಡಗಳಲ್ಲಿಯೂ
ಆರ್ಭಟಿಸುತ್ತಾ, ಕಲ್ಲುಗಳಿಂದ
ತನ್ನನ್ನು ಸೀಳಿಕೊಳ್ಳುತ್ತಾ ಇದ್ದನು. 6ಅವನು
ಯೇಸುವನ್ನು ದೂರದಿಂದ ನೋಡಿದ ಕೂಡಲೆ ಓಡಿಬಂದು ಪ್ರಣಾಮಮಾಡಿ, ಮಹಾಶಬ್ದದಿಂದ
ಆರ್ಭಟಿಸಿ,
7“ಯೇಸುವೇ, ಪರಾತ್ಪರನಾದ
ದೇವಪುತ್ರನೇ, ನನ್ನ
ಗೊಡವೆ ನಿನಗೇಕೆ? ದೇವರಾಣೆ,
ನೀನು ನನ್ನ ಕಾಡಬೇಡ,”
ಎಂದು ಹೇಳಿದನು. 8ಏಕೆಂದರೆ
ಯೇಸುವು,
“ದೆವ್ವವೇ, ಆ ಮನುಷ್ಯನನ್ನು ಬಿಟ್ಟುಹೋಗು,”
ಎಂದು ಹೇಳಿದ್ದರು.
9ಯೇಸುವು ಆ ಮನುಷ್ಯನಿಗೆ,
“ನಿನ್ನ ಹೆಸರೇನು?”
ಎಂದು ಕೇಳಲು, ಅವನು,
“ನನ್ನ ಹೆಸರು ದಂಡು; ಏಕೆಂದರೆ
ನಾವು ಬಹಳ ಮಂದಿ ಇದ್ದೇವೆ,”
ಎಂದು ಉತ್ತರಿಸಿ,
10"ಈ ಸೀಮೆಯಿಂದ ನಮ್ಮನ್ನು ಹೊರಡಿಸಬೇಡ,"
ಎಂದು ಯೇಸುವನ್ನು ಬಹಳವಾಗಿ ಬೇಡಿಕೊಂಡನು.
11ಅಲ್ಲಿದ್ದ ಗುಡ್ಡದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. 12ಆ ದೆವ್ವಗಳು,
“ಆ
ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು,”
ಎಂದು ಬೇಡಿಕೊಂಡವು. 13ಯೇಸುವು
'ಆಗಲಿ' ಎನ್ನುತ್ತಾ
ಅವುಗಳಿಗೆ ಅನುಮತಿಕೊಡಲು, ಆ ದೆವ್ವಗಳು ಹೊರಬಂದು ಹಂದಿಗಳೊಳಗೆ ಸೇರಿಕೊಂಡವು; ಆ ಹಂದಿಗಳು ಓಡಿ ಬೆಟ್ಟದ ಕಡಿದಾದ ಸ್ಥಳದಿಂದ ಸಮುದ್ರಕ್ಕೆ ಧುಮುಕಿ ಒಂದರ ಹಿಂದೊಂದು ಮುಳುಗಿ ಸತ್ತವು; ಆ ಹಿಂಡಿನಲ್ಲಿ ಸುಮಾರು ಎರಡು ಸಾವಿರ ಹಂದಿಗಳಿದ್ದವು. 14ಅವುಗಳನ್ನು
ಮೇಯಿಸುತ್ತಿದ್ದವರು ಓಡಿಹೋಗಿ ನಡೆದ ಸಂಗತಿಯನ್ನು ಪಟ್ಟಣ ಮತ್ತು ಗ್ರಾಮಪ್ರದೇಶಗಳಲ್ಲಿರುವವರಿಗೆ ತಿಳಿಸಿದರು. ನಡೆದದ್ದೇನೆಂದು
ನೋಡಲು ಜನರು ಅಲ್ಲಿಗೆ ಧಾವಿಸಿ ಬಂದರು. 15ಅವರು
ಯೇಸುವಿನ ಬಳಿಗೆ ಬಂದು, ದೆವ್ವಗಳ
ದಂಡಿನಿಂದ ಪೀಡಿತನಾಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಚಿತ್ತನಾಗಿ ಕುಳಿತುಕೊಂಡಿರುವುದನ್ನು ನೋಡಿ ಭಯಭೀತರಾದರು. 16ಮಾತ್ರವಲ್ಲದೆ
ನಡೆದ ಸಂಗತಿಯನ್ನು ನೋಡಿದ್ದವರು, ದೆವ್ವಹಿಡಿದಿದ್ದ
ಮನುಷ್ಯನಿಗೂ ಮತ್ತು ಹಂದಿಗಳಿಗೂ ಏನು ಸಂಭವಿಸಿತೆಂಬುದನ್ನು ಅವರಿಗೆ ವಿವರಿಸಿದರು. 17ಅವರು
ಯೇಸುವಿನ ಬಳಿ ನಡೆದು ತಮ್ಮ ಸೀಮೆಯನ್ನು ಬಿಟ್ಟುಹೋಗುವಂತೆ ಯೇಸುವನ್ನು ಬೇಡಿಕೊಂಡರು.
18ಯೇಸುವು ದೋಣಿಯನ್ನು ಹತ್ತುತ್ತಿದ್ದಾಗ ದೆವ್ವಹಿಡಿದಿದ್ದ ಆ ಮನುಷ್ಯನು,
"ನಾನೂ ನಿನ್ನ ಜೊತೆಯಲ್ಲಿ ಇರುತ್ತೇನೆ,"
ಎಂದು ಬೇಡಿಕೊಂಡನು. 19ಆದರೆ
ಯೇಸುವು ಅದಕ್ಕೆ ಒಪ್ಪದೆ,
“ನೀನು ನಿನ್ನ ಮನೆಗೂ, ನಿನ್ನ
ಜನರ ಬಳಿಗೂ ಹೋಗಿ, ಸ್ವಾಮಿಯು
ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಮಾಡಿದ ಉಪಕಾರವೆಲ್ಲವನ್ನೂ ಹೇಳು,”
ಎಂದರು. 20ಅವನು
ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವೆಲ್ಲವನ್ನೂ ದೆಕಪೊಲಿಯಲ್ಲಿ ಸಾರತೊಡಗಿದನು. ಜನರೆಲ್ಲರು
ಇದನ್ನು ಕೇಳಿ ಆಶ್ಚರ್ಯಪಟ್ಟರು.
(ಮತ್ತಾಯ 9:18-26; ಲೂಕ
8:40-56)
21ಪುನಃ ಯೇಸು ದೋಣಿಯಲ್ಲಿ ಆಚೆಯ ದಡಕ್ಕೆ ಹೋದಾಗ ಜನರ ದೊಡ್ಡ ಗುಂಪು ಯೇಸುವಿನ ಬಳಿಗೆ ಬಂದು ಸೇರಿತು. ಅವರು
ಸಮುದ್ರದ ದಡದಲ್ಲಿದ್ದರು. 22ಆಗ ಸಭಾಮಂದಿರದ ಸಭಾಪತಿಗಳಲ್ಲಿ ಒಬ್ಬನಾದ ಯಾಯಿರನೆಂಬವನು ಬಂದು ಯೇಸುವನ್ನು ಕಂಡು ಅವರ ಪಾದಗಳಿಗೆ ಅಡ್ಡಬಿದ್ದು,
23“ನನ್ನ ಚಿಕ್ಕ ಮಗಳು ಸಾಯುವ ಸ್ಥಿತಿಯಲ್ಲಿದ್ದಾಳೆ. ಆಕೆಯನ್ನು
ಗುಣಪಡಿಸಿ ಬದುಕಲು ಸಾಧ್ಯವಾಗುವಂತೆ ನೀವು ಬಂದು ಅವಳ ಮೇಲೆ ಕೈಯಿಡಬೇಕು,”
ಎಂದು ಬಹಳವಾಗಿ ಬೇಡಿಕೊಂಡನು. 24ಆಗ ಯೇಸುವು ಯಾಯಿರನೊಂದಿಗೆ ಅವನ ಮನೆಗೆ ಹೋದರು. ಜನರ
ದೊಡ್ಡ ಗುಂಪು ಅವರನ್ನು ತಳ್ಳುತ್ತಾ ಅವರ ಹಿಂದೆಯೇ ಹೋಯಿತು.
25ಆಗ ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಅಲ್ಲಿಗೆ ಬಂದಳು. 26ಅವಳು
ಅನೇಕ ವೈದ್ಯರಲ್ಲಿ ಬಹುವಾಗಿ ಕಷ್ಟವನ್ನು ಅನುಭವಿಸಿ ತನ್ನಲ್ಲಿದ್ದುದೆಲ್ಲವನ್ನು ಖರ್ಚುಮಾಡಿದರೂ ಪ್ರಯೋಜನವಾಗದೆ ಆ ರೋಗವು ಹೆಚ್ಚುತ್ತಾ ಬಂದಿತೇ ಹೊರತು ಮತ್ತೇನೂ ಪ್ರಯೋಜನವಾಗಿರಲಿಲ್ಲ. 27-28ಯೇಸುವಿನ ಸಮಾಚಾರವನ್ನು ಕೇಳಿಸಿಕೊಂಡ ಆ ಹೆಂಗಸು, “ನಾನು
ಯೇಸುವಿನ ಮೇಲಂಗಿಯನ್ನು ಮುಟ್ಟಿದರೆ ಸಾಕು, ವಾಸಿಯಾಗುವೆನು,”
ಎಂದುಕೊಂಡು ಜನರ
ಗುಂಪಿನ ಹಿಂದಿನಿಂದ ಬಂದು, 29ಅವರ
ಉಡುಪನ್ನು ಮುಟ್ಟಿದಳು; ಕೂಡಲೆ
ಅವಳ ರಕ್ತಸ್ರಾವವು ನಿಂತುಹೋಯಿತು. ತನ್ನನ್ನು
ಕಾಡುತ್ತಿದ್ದ ರೋಗವು ಗುಣವಾಯಿತು ಎಂಬುದು ಆಕೆಗೆ ತಿಳಿಯಿತು. 30ಆ ಕ್ಷಣವೇ ತಮ್ಮಿಂದ ಶಕ್ತಿಯು ಹೊರಟುಹೋದುದನ್ನು ಗ್ರಹಿಸಿ ಯೇಸು ಹಿಂತಿರುಗಿ ಗುಂಪನ್ನು ನೋಡಿ,
“ನನ್ನ ಮೇಲಂಗಿಯನ್ನು ಮುಟ್ಟಿದವರು ಯಾರು?”
ಎಂದು ಕೇಳಿದರು. 31ಆಗ ಶಿಷ್ಯರು ಅವರಿಗೆ,
“ಜನರ ಗುಂಪು ನಿಮ್ಮನ್ನು ನೂಕುತ್ತಿರುವುದು ನಿಮಗೆ ತಿಳಿದೇ ಇದೆ. ಹೀಗಿರುವಾಗ,
‘ನನ್ನನ್ನು ಮುಟ್ಟಿದವರು ಯಾರು?’ ಎಂದು
ಕೇಳುತ್ತೀರಲ್ಲ”
ಎಂದು ಹೇಳಿದರು. 32ಆದರೂ
ಹೀಗೆ ಮಾಡಿದವಳನ್ನು ನೋಡಬೇಕೆಂದು ಯೇಸುವು ಸುತ್ತಲೂ ಹುಡುಕುತ್ತಿರಲು 33ಆ ಸ್ತ್ರೀ ತನಗೆ ಸಂಭವಿಸಿದ್ದನ್ನು ಅರಿತು ಭಯದಿಂದ ನಡುಗುತ್ತಾ ಬಂದು ಯೇಸುವಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲ ಹೇಳಿದಳು. 34ಅದಕ್ಕೆ
ಯೇಸುವು ಅವಳಿಗೆ,
“ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ
ಹೋಗು; ನಿನ್ನನ್ನು
ಕಾಡುತ್ತಿದ್ದ ರೋಗದಿಂದ ವಿಮುಕ್ತಳಾಗಿ ಆರೋಗ್ಯದಿಂದಿರು”
ಎಂದು ಹೇಳಿದರು.
35ಅವರು ಇನ್ನೂ ಮಾತನಾಡುತ್ತಿದ್ದಾಗಲೇ ಸಭಾಮಂದಿರದ ಸಭಾಪತಿಯ ಮನೆಯಿಂದ ಬಂದು,
“ನಿನ್ನ ಮಗಳು ತೀರಿಹೋದಳು! ಇನ್ನು
ಗುರುವಿಗೇಕೆ ತೊಂದರೆ ಕೊಡುವೆ?”
ಎಂದು ಹೇಳಿದರು. 36ಅವರ
ಮಾತಿಗೆ ಲಕಷ್ಯಕೊಡದೆ ಯೇಸು ಸಭಾಮಂದಿರದ ಸಭಾಪತಿಗೆ,
“ಭಯಪಡಬೇಡ, ನಂಬಿಕೆ ಮಾತ್ರ ನಿನ್ನಲ್ಲಿರಲಿ”
ಎಂದು ಹೇಳಿದರು. 37ಮತ್ತು
ಯೇಸುವು ಪೇತ್ರ, ಯಕೋಬ
ಮತ್ತು ಯಕೋಬನ ತಮ್ಮನಾದ ಯೊವಾನ್ನನನ್ನು ಹೊರತು ಬೇರೆ ಯಾರನ್ನೂ ತಮ್ಮೊಂದಿಗೆ ಬರಗೊಡದೆ, 38ಸಭಾಮಂದಿರದ
ಸಭಾಪತಿಯ ಮನೆಗೆ ಬಂದಾಗ ಗದ್ದಲವನ್ನೂ, ಬಹಳವಾಗಿ
ಅಳುತ್ತಿರುವವರನ್ನೂ, ಗೋಳಾಡುತ್ತಿರುವವರನ್ನೂ
ಕಂಡರು. 39ಮನೆಯೊಳಕ್ಕೆ
ಹೋದ ಯೇಸುವು ಅವರಿಗೆ,
“ನೀವು ಗದ್ದಲಮಾಡುವುದೂ, ಅಳುವುದೂ
ಏತಕ್ಕೆ? ಹುಡುಗಿಯು
ಸತ್ತಿಲ್ಲ, ನಿದ್ರೆಮಾಡುತ್ತಿದ್ದಾಳೆ,”
ಎಂದರು. 40ಇದನ್ನು
ಕೇಳಿ ಅವರು ಯೇಸುವನ್ನು ಹಾಸ್ಯಮಾಡತೊಡಗಿದರು. ಆದರೆ
ಯೇಸುವು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ, ಹುಡುಗಿಯ
ತಂದೆತಾಯಿಯನ್ನು ಮತ್ತು ತನ್ನೊಂದಿಗಿದ್ದವರನ್ನು ಜೊತೆಯಲ್ಲಿ ಕರೆದುಕೊಂಡು ಹುಡುಗಿಯ ಬಳಿಗೆ ಹೋದರು. 41ಅವರು
ಹುಡುಗಿಯ ಕೈ ಹಿಡಿದು,
“ತಾಲಿಥ ಕೂಮಿ”
ಅಂದರೆ,
“ಕುಮಾರಿ, ಎದ್ದೇಳು”
ಎಂದರು. 42ಕೂಡಲೆ
ಆ ಹುಡುಗಿಯು ಎದ್ದು ನಡೆದಾಡತೊಡಗಿದಳು; ಅವಳು
ಹನ್ನೆರಡು ವರ್ಷ ವಯಸ್ಸಿನವಳಾಗಿದ್ದಳು. ಇದನ್ನು
ನೋಡಿ ಅಲ್ಲಿದ್ದವರು ಆನಂದಪರವಶರಾದರು. 43ಆದರೆ
ನಡೆದುದನ್ನು ಯಾರಿಗೂ ತಿಳಿಸಬಾರದೆಂದು ಯೇಸುವು ಅವರಿಗೆ ಮತ್ತೆ ಮತ್ತೆ ಆಜ್ಞಾಪಿಸಿದರು ಮತ್ತು ಆ ಹುಡುಗಿಗೆ ಏನನ್ನಾದರೂ ತಿನ್ನಲು ಕೊಡುವಂತೆ ಅಲ್ಲಿದ್ದವರಿಗೆ ಸೂಚಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ