ಅಧ್ಯಾಯ 6

ಮಾರ್ಕನು ಬರೆದ ಸುಸಂದೇಶಗಳು


ಸ್ವಂತ ಊರಿನವರ ತಾತ್ಸಾರ
(ಮತ್ತಾಯ 13:54-58; ಲೂಕ 4:15-30)

1ಯೇಸುವು ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು; ಶಿಷ್ಯರು ಅವರನ್ನು ಹಿಂಬಾಲಿಸಿದರು. 2ಸಬ್ಬತ್ದಿನದಂದು ಅವರು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡತೊಡಗಿದರು; ಅಲ್ಲಿ ನೆರೆದಿದ್ದವರು ಅವರ ಬೋಧನೆಯನ್ನು ಕೇಳುತ್ತಾ ಆಶ್ಚರ್ಯಪಟ್ಟು,
"ಇವುಗಳು ಈತನಿಗೆ ಎಲ್ಲಿಂದ ಬಂತು? ಈತನ ಕೈಗಳಿಂದ ಇಂಥ ಮಹತ್ಕಾರ್ಯಗಳು ಆಗುವಂತೆ ಈತನಿಗೆ ಕೊಡಲ್ಪಟ್ಟ ಜ್ಞಾನವು ಎಂಥದ್ದು? 3ಇವನು ಮರಿಯಳ ಮಗನಲ್ಲವೇ? ಈತ ಬಡಗಿಯಲ್ಲವೇ? ಯಕೋಬ, ಯೋಸೆ, ಯೂದ, ಸೀಮೋನ ಇವನ ಸಹೋದರರಲ್ಲವೇ? ಈತನ ಸಹೋದರಿಯರು ಇಲ್ಲೇ ನಮ್ಮ ಜೊತೆಯಲ್ಲಿ ಇದ್ದಾರಲ್ಲವೇ?"
ಎಂದು ಹೇಳಿ ಯೇಸುವನ್ನು ತಾತ್ಸಾರವಾಗಿ ನೋಡಿದರು. 4ಅದಕ್ಕೆ ಯೇಸು ಅವರಿಗೆ,
"ಪ್ರವಾದಿಗೆ ಬೇರೆಲ್ಲಿಯಾದರೂ ಮರ್ಯಾದೆ, ಗೌರವ ದೊರಕೀತು; ಆದರೆ ಸ್ವದೇಶದಲ್ಲಿಯೂ, ಸ್ವಂತ ಜನರಲ್ಲಿಯೂ, ಸ್ವಂತ ಮನೆಯಲ್ಲಿಯೂ ಗೌರವ ದೊರಕದು,"
ಎಂದು ಹೇಳಿದರು. 5ಅಲ್ಲಿ ಅವರು ಕೆಲವು ರೋಗಿಗಳ ಮೇಲೆ ತಮ್ಮ ಕೈಗಳನ್ನಿಟ್ಟು ಗುಣಪಡಿಸಿದರೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವುದಕ್ಕೆ ಆಗಲಿಲ್ಲ. 6ಯೇಸುವು ಜನರ ಅವಿಶ್ವಾಸವನ್ನು ಕಂಡು ಆಶ್ಚರ್ಯಪಟ್ಟರು.

ಸೇವಾಕಾರ್ಯಕ್ಕೆ ಶಿಷ್ಯರ ನಿಯೋಜನೆ
(ಮತ್ತಾಯ 9:35; 10:14; ಲೂಕ 9:1-6)

7ಯೇಸುವು ಸುತ್ತಲಿನ ಹಳ್ಳಿಗಳಿಗೆ ಹೋಗಿ ಬೋಧಿಸುತ್ತಾ ಇದ್ದರು. ಅವರು ಹನ್ನೆರಡು ಮಂದಿಯನ್ನು ತಮ್ಮ ಬಳಿಗೆ ಕರೆದು ಅವರಿಗೆ ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ಕೊಟ್ಟು, ಅವರನ್ನು ತಲಾ ಇಬ್ಬರಂತೆ ಕಳುಹಿಸಿದರು. 8ಅವರನ್ನು ಕಳುಹಿಸುವಾಗ,
"ನಿಮ್ಮ ಪ್ರಯಾಣಕ್ಕಾಗಿ ನೀವು ಒಂದು ಕೋಲಿನ ಹೊರತು ಚೀಲವನ್ನಾಗಲಿ, ರೊಟ್ಟಿಯನ್ನಾಗಲಿ, ಹಣವನ್ನಾಗಲಿ ತೆಗೆದುಕೊಳ್ಳಬಾರದು, 9ಚಪ್ಪಲಿಗಳನ್ನು ಮೆಟ್ಟಿಕೊಂಡಿರಿ, ನೀವು ಎರಡು ಅಂಗಿಗಳನ್ನು ಹಾಕಿಕೊಳ್ಳಬಾರದು,"
ಎಂದು ಆಜ್ಞಾಪಿಸಿದರು. 10ಅಲ್ಲದೆ,
"ಯಾವುದೇ ಸ್ಥಳದಲ್ಲಿರುವ ಯಾವುದೋ ಒಂದು ಮನೆಯನ್ನು ನೀವು ಪ್ರವೇಶಿಸಿದರೆ ಸ್ಥಳದಿಂದ ನೀವು ಹೊರಡುವ ತನಕ ಅಲ್ಲೇ ಉಳಿದುಕೊಂಡಿರಿ. 11ಯಾರಾದರೂ ನಿಮ್ಮನ್ನು ಅಂಗೀಕರಿಸದೆ ಇದ್ದರೆ ಇಲ್ಲವೆ ನಿಮ್ಮ ಮಾತನ್ನು ಕೇಳದೆ ಇದ್ದರೆ, ನೀವು ಅಲ್ಲಿಂದ ಹೊರಡುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನೂ ಜಾಡಿಸಿಬಿಡಿರಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ,"
ಎಂದರು. 12ಶಿಷ್ಯರು ಹೊರಟು ಹೋಗಿ,
"ಪಶ್ಚಾತ್ತಾಪ ಪಟ್ಟು ಪಾಪಕ್ಕೆ ವಿಮುಖರಾಗಿ; ದೇವರಿಗೆ ಅಭಿಮುಖರಾಗಿರಿ,"
ಎಂದು ಜನರಿಗೆ ಸಾರಿ ಹೇಳಿದರು. 13ಅವರು ಅನೇಕರ ದೆವ್ವಗಳನ್ನು ಬಿಡಿಸಿದರು. ಅನೇಕ ರೋಗಿಗಳಿಗೆ ತೈಲಲೇಪನ ಮಾಡಿ ಅವರನ್ನು ಗುಣಪಡಿಸಿದರು

ಸ್ನಾನಿಕ ಯೊವಾನ್ನನ ಮರಣದ ನಂತರ ಯೇಸುವಿನ ವಿಷಯದಲ್ಲಿ ಹೆರೋದನಿಗೆ ದಿಗಿಲಾದದ್ದು
(ಮತ್ತಾಯ 14:1-12; ಲೂಕ 9:7-9; 3:19-20)

14ಅರಸನಾದ ಹೆರೋದನು ಯೇಸುವಿನ ವಿಷಯವಾಗಿ ಕೇಳಿದನು. ಅವರ ಹೆಸರು ಎಲ್ಲಾ ಕಡೆಗೂ ಪ್ರಖ್ಯಾತವಾಗಿತ್ತು. 'ಸ್ನಾನಿಕ ಯೊವಾನ್ನನು ಮತ್ತೆ ಬದುಕಿ ಬಂದಿದ್ದಾನೆ; ಆದುದರಿಂದ ಮಹತ್ಕಾರ್ಯಗಳನ್ನು ನಡೆಸುವ ಶಕ್ತಿ ಆತನಲ್ಲಿ ಇವೆ' ಎಂದು ಜನರಾಡುತ್ತಿದ್ದರು. 15ಇನ್ನೂ ಕೆಲವರು, ಎಲೀಯನೇ ಈತನು ಎಂತಲೂ, ಮತ್ತೆ ಕೆಲವರು, ಈತನೂ ಒಬ್ಬ ಪ್ರವಾದಿ ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನಂತೆ ಈತನೂ ಇದ್ದಾನೆ ಎಂದರು. 16ಹೆರೋದನು  ಯೇಸುವಿನ ವಿಷಯ ಕೇಳಿದಾಗ,
"ನಾನು ತಲೆ ಕಡಿಸಿದ ಯೊವಾನ್ನನು ಇವನೇ; ಇವನು ಸತ್ತವರೊಳಗಿಂದ ಎದ್ದು ಬಂದಿದ್ದಾನೆ,"
ಎಂದುಕೊಂಡನು. 17ಏಕೆಂದರೆ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳಿಗಾಗಿ ಯೊವಾನ್ನನನ್ನು ಕರೆಯಿಸಿ, ಹಿಡಿದು ಕಟ್ಟಿ ಅವನನ್ನು ಸೆರೆಯಲ್ಲಿ ಹಾಕಿಸಿದ್ದನು; ಹೆರೋದ್ಯಳು ಹೆರೋದನ ಅಣ್ಣನಾದ ಫಿಲಿಪ್ಪನ ಹೆಂಡತಿ.  18ಆದರೆ ಯೊವಾನ್ನನು ಹೆರೋದನಿಗೆ,
"ನಿನ್ನ ಸಹೋದರನ ಹೆಂಡತಿಯನ್ನು ಇಟ್ಟುಕೊಂಡಿರುವುದು ನ್ಯಾಯವಲ್ಲ"
ಎಂದು ಹೇಳಿದ್ದನು. 19ಇದಕ್ಕೆ ಹೆರೋದ್ಯಳು ಯೊವಾನ್ನನ ಮೇಲೆ ದ್ವೇಷವಿಟ್ಟುಕೊಂಡು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಅದು ಸಾಧ್ಯವಾಗಿರಲಿಲ್ಲ. 20ಯೊವಾನ್ನನು ನೀತಿವಂತನೂ, ಪರಿಶುದ್ಧನೂ ಆದ ಮನುಷ್ಯನೆಂದು ಹೆರೋದನು ನಂಬಿದ್ದ ಕಾರಣ ಭಯಪಟ್ಟು ಅವನಿಗೆ ಯಾವ ಅಪಾಯವೂ ಆಗದಂತೆ ನೋಡಿಕೊಂಡಿದ್ದನು. ಯೊವಾನ್ನನು ಹೇಳಿದ್ದನ್ನೆಲ್ಲಾ ಕೇಳಿ ಗಲಿಬಿಲಿಗೊಳ್ಳುತ್ತಿದ್ದರೂ ಆನೇಕ ಕಾರ್ಯಗಳನ್ನು ಅವನು ಪಾಲಿಸಿದ್ದನು. ಹೀಗಿರಲಾಗಿ ಹೆರೋದ್ಯಳಿಗೆ ಅನುಕೂಲಕರವಾದ ಒಂದು ದಿನವು ಬಂದಿತು
ಹೆರೋದನು ತನ್ನ ಹುಟ್ಟಿದ ದಿನದಂದು ತನ್ನ ಪ್ರಭುಗಳಿಗೂ, ಸೈನ್ಯಾಧಿಪತಿಗಳಿಗೂ, ಗಲಿಲೇಯದ ಪ್ರಮುಖರಿಗೂ ಔತಣವನ್ನು ಏರ್ಪಡಿಸಿದನು; 22ಆಗ ಹೆರೋದ್ಯಳ ಮಗಳು ಔತಣಕೂಟದಲ್ಲಿ ನಾಟ್ಯವಾಡಿ ಹೆರೋದನನ್ನೂ, ಅವನ ಸಂಗಡ ಕುಳಿತಿದ್ದವರನ್ನೂ ಮೆಚ್ಚಿಸಿದಳು. ಅರಸನು ಹುಡುಗಿಗೆ,
"ನಿನಗೆ ಬೇಕಾದುದನ್ನು ಕೇಳಿಕೋ; ನಾನದನ್ನು ನಿನಗೆ ಕೊಡುತ್ತೇನೆ, 23ನೀನು ನನ್ನಿಂದ ಏನನ್ನು ಕೇಳಿಕೊಂಡರೂ, ಅದು ನನ್ನ ರಾಜ್ಯದ ಅರ್ಧಬಾಗವೇ ಆಗಿದ್ದರೂ ನಾನು ನಿನಗೆ ಕೊಡುತ್ತೇನೆ,"
ಎಂದು ಅವಳಿಗೆ ಆಣೆಯಿಟ್ಟು ಹೇಳಿದನು
24ಆಗ ಅವಳು ತನ್ನ ತಾಯಿಯ ಬಳಿಗೆ ಹೋಗಿ,
"ನಾನು ಏನನ್ನು ಕೇಳಿಕೊಳ್ಳಲಿ?"
ಎಂದು ಕೇಳಲು ಆಕೆಯು,
"ಸ್ನಾನಿಕ ಯೊವಾನ್ನನ ತಲೆಯನ್ನು ತಂದುಕೊಡಲು ಕೇಳಿಕೋ,"
ಎಂದಳು. 25ಕೂಡಲೆ ಅವಳು ಅರಸನ ಬಳಿಗೆ ಬಂದು,
"ಸ್ನಾನಿಕ ಯೊವಾನ್ನನ ತಲೆಯನ್ನು ಹರಿವಾಣದಲ್ಲಿ ನನಗೆ ತರಿಸಿಕೊಡಿ,"
ಎಂದು ಕೇಳಿಕೊಂಡಳು. 26ಆಗ ಅರಸನು ಬಹಳವಾಗಿ ದುಃಖಪಟ್ಟನು; ಆದರೂ ತನ್ನ ಆಣೆಯ ನಿಮಿತ್ತವಾಗಿಯೂ, ತನ್ನೊಂದಿಗೆ ಔತಣಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅವಳನ್ನು ತಿರಸ್ಕರಿಸುವುದಕ್ಕೆ ಮನಸ್ಸಿಲ್ಲದವನಾದನು
27ಅವನು ಕೂಡಲೆ ಯೊವಾನ್ನನ ತಲೆಯನ್ನು ತರಿಸುವುದಕ್ಕಾಗಿ ಒಬ್ಬ ಕೊಲೆಗಡುಕನಿಗೆ ಅಪ್ಪಣೆಕೊಟ್ಟು ಕಳುಹಿಸಿದನು; 28ಅವನು ಹೋಗಿ ಸೆರೆಮನೆಯಲ್ಲಿದ್ದ ಯೊವಾನ್ನನ ತಲೆಯನ್ನು ಕಡಿದು ಹರಿವಾಣದಲ್ಲಿಟ್ಟು ಹುಡುಗಿಗೆ ತಂದೊಪ್ಪಿಸಿದನು. ಹುಡುಗಿಯು ಅದನ್ನು ತೆಗೆದುಕೊಂಡು ಹೋಗಿ ತನ್ನ ತಾಯಿಗೆ ಕೊಟ್ಟಳು. 29ಯೊವಾನ್ನನ ಶಿಷ್ಯರು ಅದನ್ನು ಕೇಳಿ ಅಲ್ಲಿಗೆ ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಯಲ್ಲಿ ಇಟ್ಟರು

ಐದು ಸಾವಿರ ಜನರಿಗೆ ಊಟ ಮಾಡಿಸಿದ್ದು; ಸಮುದ್ರದ ಮೇಲೆ ನಡೆದದ್ದು
(ಮತ್ತಾಯ 14:13-36; ಲೂಕ 9:10-17; ಯೊವಾನ್ನ 6:1-21)

30ಇತ್ತ ಪ್ರೇಷಿತರು ಯೇಸುವಿನ ಬಳಿಗೆ ಒಟ್ಟಾಗಿ ಕೂಡಿಬಂದು ತಾವು ಮಾಡಿದ್ದ ಮತ್ತು ಬೋಧಿಸಿದ್ದೆಲ್ಲವುಗಳನ್ನು ಯೇಸುವಿಗೆ ತಿಳಿಸಿದರು. 31ಆಗ ಯೇಸುವು ಅವರಿಗೆ,
"ನೀವು ಮಾತ್ರ ಪ್ರತ್ಯೇಕವಾಗಿ ಅರಣ್ಯ ಸ್ಥಳಕ್ಕೆ ಬಂದು ಸ್ವಲ್ಪ ಸಮಯ ವಿಶ್ರಮಿಸಿಕೊಳ್ಳಿರಿ,"
ಎಂದರು. ಏಕೆಂದರೆ ಅಲ್ಲಿ ಅನೇಕರು ಬರುತ್ತಾ ಹೋಗುತ್ತಾ ಇದ್ದುದರಿಂದ ಊಟಮಾಡುವುದಕ್ಕೂ ಅವರಿಗೆ ಸಮಯವಿರಲಿಲ್ಲ. 32ಆಗ ಅವರೆಲ್ಲರೂ ದೋಣಿಯಲ್ಲಿ ಏಕಾಂತವಾಗಿ ಅರಣ್ಯಸ್ಥಳಕ್ಕೆ ಹೊರಟು ಹೋದರು. 33ಅವರು ಹೊರಡುವುದನ್ನು ನೋಡಿದ ಜನರಲ್ಲಿ ಅನೇಕರು ಅವರ ಗುರುತು ಹಿಡಿದು ಎಲ್ಲಾ ಪಟ್ಟಣಗಳಿಂದ ಕಾಲುನಡಿಗೆಯಾಗಿ ಅಲ್ಲಿಗೆ ಓಡುತ್ತಾ ಅವರಿಗಿಂತಲೂ ಮುಂದಾಗಿ ಅವರು ತಲುಪುವಲ್ಲಿಗೆ ಹೋಗಿ ಸೇರಿದರು. 34ಯೇಸುವು ಹೊರಬಂದು ಸೇರಿದ ಜನರನ್ನು ನೋಡಿ ಅವರ ಮೇಲೆ ಕನಿಕರ ಪಟ್ಟರು; ಅವರು ಕುರುಬನಿಲ್ಲದ ಕುರಿಗಳಂತೆ ಇರುವುದನ್ನು ಕಂಡು ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದರು. 35ಆಗಲೇ ಸಮಯ ಬಹಳ ಹೊತ್ತಾದುದರಿಂದ ಯೇಸುವಿನ ಶಿಷ್ಯರು ಅವರ ಬಳಿಗೆ ಬಂದು,
"ಇದು ಅರಣ್ಯ ಸ್ಥಳ ಮತ್ತು ಈಗ ಸಮಯವು ಬಹಳವಾಗಿ ದಾಟಿದೆ; 36ಇವರು ಸುತ್ತಲಿನ ಊರುಗಳಿಗೂ, ಹಳ್ಳಿಗಳಿಗೂ ಹೋಗಿ ತಮಗೋಸ್ಕರ ರೊಟ್ಟಿಯನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡಿ; ಅವರಿಗೆ ತಿನ್ನಲು ಏನೂ ಇಲ್ಲ,"
ಎಂದರು. 37ಅದಕ್ಕೆ ಪ್ರತ್ಯುತ್ತರವಾಗಿ ಯೇಸುವು ಅವರಿಗೆ,
"ನೀವೇ ಅವರಿಗೆ ತಿನ್ನಲು ಕೊಡಿರಿ,"
ಎಂದಾಗ ಅವರು,
"ನಾವು ಹೋಗಿ ಎರಡು ನೂರು ನಾಣ್ಯಕ್ಕೆ ರೊಟ್ಟಿಯನ್ನು ತಂದು ಅವರಿಗೆ ತಿನ್ನುವುದಕ್ಕೆ ಕೊಡುವುದೇ?"
ಎಂದರು. 38ಅದಕ್ಕೆ ಯೇಸುವು ಅವರಿಗೆ,
"ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿರಿ,"
ಅನ್ನಲು ಅವರು ಅದನ್ನು ತಿಳಿದುಕೊಂಡು ಬಂದು,
"ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ,"
ಎಂದು ಹೇಳಿದರು. 39ಆಗ ಅಲ್ಲಿದ್ದವರೆಲ್ಲರೂ ಹಸುರು ಹುಲ್ಲಿನ ಮೇಲೆ ಪಂಕ್ತಿ ಪಂಕ್ತಿಗಳಾಗಿ ಕುಳಿತುಕೊಳ್ಳುವಂತೆ ಯೇಸುವು ಅವರಿಗೆ ಅಪ್ಪಣೆಕೊಟ್ಟರು. 40ಅವರು ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕುಳಿತುಕೊಂಡರು. 41ಆಗ ಯೇಸುವು ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ರೊಟ್ಟಿಗಳನ್ನು ಮುರಿದು, ಅವರಿಗೆ ಹಂಚುವುದಕ್ಕಾಗಿ ತಮ್ಮ ಶಿಷ್ಯರಿಗೆ ಕೊಟ್ಟರು; ಮತ್ತು ಎರಡು ಮೀನುಗಳನ್ನು ಅವರೆಲ್ಲರಿಗೂ ಹಂಚಿದರು. 42ಎಲ್ಲರೂ ತಿಂದು ತೃಪ್ತರಾದರು. 43ಆಗ ಅವರು ಹನ್ನೆರಡು ಬುಟ್ಟಿಗಳಲ್ಲಿ ರೊಟ್ಟಿ ಮತ್ತು ಮೀನಿನ ತುಂಡುಗಳನ್ನು ತುಂಬಿದರು. 44 ರೊಟ್ಟಿಗಳನ್ನು ತಿಂದವರು ಸುಮಾರು ಐದು ಸಾವಿರ ಗಂಡಸರು
45ಯೇಸುವು ಜನರನ್ನು ಅಲ್ಲಿಂದ ಕಳುಹಿಸುವಷ್ಟರಲ್ಲಿ ಶಿಷ್ಯರು ದೋಣಿಯನ್ನು ಹತ್ತಿ ಮುಂಚಿತವಾಗಿಯೇ ಆಚೆಯ ದಡದ ಬೇತ್ಸಾಯಿದಕ್ಕೆ ಹೋಗುವಂತೆ ಆಜ್ಞಾಪಿಸಿದ್ದರು. 46ಅವರನ್ನು ಕಳುಹಿಸಿದ ನಂತರ ಯೇಸುವು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟದ ಮೇಲಕ್ಕೆ ಹೊರಟು ಹೋದರು. 47ಸಾಯಂಕಾಲವಾದಾಗ ದೋಣಿಯು ಸಮುದ್ರದ ಮಧ್ಯಭಾಗದಲ್ಲಿತ್ತು; ಆದರೆ ಯೇಸುವೊಬ್ಬರೇ ದಡದಲ್ಲಿದ್ದರು. 48ಗಾಳಿಯು ಎದುರಾಗಿ ಇದ್ದುದರಿಂದ ದೋಣಿಯಲ್ಲಿದ್ದವರು ಕಷ್ಟಪಟ್ಟು ಹುಟ್ಟು ಹಾಕುತ್ತಿರುವುದನ್ನು ಯೇಸುವು ನೋಡಿ ಸುಮಾರು ರಾತ್ರಿ ನಾಲ್ಕನೇ ಜಾವದಲ್ಲಿ ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಬಂದು ಅವರನ್ನು ದಾಟಿ ಹೋಗಬೇಕೆಂದಿದ್ದರು. 49ಆದರೆ ಅವರು ಸಮುದ್ರದ ಮೇಲೆ ನಡೆಯುತ್ತಿರುವುದನ್ನು ನೋಡಿ ಶಿಷ್ಯರು ಅದೊಂದು ಭೂತವೆಂದು ಭಾವಿಸಿ ಕೂಗಿಕೊಂಡರು. 50ಅವರೆಲ್ಲರು ಯೇಸುವನ್ನು ನೋಡಿ ತತ್ತರಿಸಿದರು. ಕೂಡಲೆ ಯೇಸುವು ಅವರ ಸಂಗಡ ಮಾತನಾಡಿ ಅವರಿಗೆ,
 "ಧೈರ್ಯವಾಗಿರಿ, ನಾನೇ; ಅಂಜಬೇಡಿರಿ,"
ಎಂದು ಹೇಳಿ, 51ದೋಣಿಯನ್ನು ಹತ್ತಿ ಅವರ ಬಳಿಗೆ ಬಂದರು; ಆಗ ಗಾಳಿಯು ನಿಂತಿತು; ಅವರು ದಿಗ್ಭ್ರಮೆಗೊಳಗಾದರು. 52ಅವರ ಹೃದಯವು ಕಠಿಣವಾಗಿದ್ದುದರಿಂದ ರೊಟ್ಟಿಗಳ ಅದ್ಭುತವನ್ನು ಅವರು ಗ್ರಹಿಸಿರಲಿಲ್ಲ
53ಅವರು ಸಮುದ್ರವನ್ನು ದಾಟಿ ಗೆನೆಜರೇತ್ದೇಶದ ದಡಕ್ಕೆ ಮುಟ್ಟಿ ದೋಣಿಯನ್ನು ಕಟ್ಟಿಹಾಕಿದರು. 54ಅವರು ದೋಣಿಯಿಂದ ಇಳಿದು ಬಂದ ಕೂಡಲೆ ಜನರು ಯೇಸುವನ್ನು ಗುರುತಿಸಿ 55ಸುತ್ತಲಿನ ಊರಿನಲ್ಲೆಲ್ಲಾ ಓಡಾಡಿ ಅನಾರೋಗ್ಯಪೀಡಿತರನ್ನು ಹಾಸಿಗೆಗಳೊಂದಿಗೆ ಎತ್ತಿಕೊಂಡು ಬರಲಾರಂಭಿಸಿದರು. 56ತರುವಾಯ ಯೇಸುವು ಯಾವ ಯಾವ ಹಳ್ಳಿಗಳಿಗೆ, ಪಟ್ಟಣಗಳಿಗೆ, ಸೀಮೆಗೆ ಪ್ರವೇಶಿಸಿದರೋ ಅಲ್ಲೆಲ್ಲಾ ಅವರು ರೋಗಿಗಳನ್ನು ಬೀದಿಗಳಲ್ಲಿ ಮಲಗಿಸಿ ಯೇಸುವಿನ ಉಡುಪಿನ ಅಂಚನ್ನಾದರೂ ಅವರು ಮುಟ್ಟಲು ಅವಕಾಶ ಮಾಡಿಬೇಕೆಂದು ಯೇಸುವಿನಲ್ಲಿ ಬೇಡಿಕೊಂಡರು; ಯಾರೆಲ್ಲಾ ಯೇಸುವನ್ನು ಮುಟ್ಟಿದರೋ ಅವರೆಲ್ಲರೂ ಗುಣಹೊಂದಿದರು.  



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ