ಅಧ್ಯಾಯ 16

ಮಾರ್ಕನು ಬರೆದ ಸುಸಂದೇಶಗಳು


ಸಾವಿನ ಸೋಲು
(ಮತ್ತಾಯ 28:1-8; ಲೂಕ 24:1-12; ಯೊವಾನ್ನ 20:1-10)


1ಸಬ್ಬತ್ತು ದಿನ ಕಳೆದ ಬಳಿಕ ಮಗ್ದಲದ ಮರಿಯಳೂ ಯಕೋಬನ ತಾಯಿ ಮರಿಯಳೂ ಹಾಗು ಸಲೋಮೆಯೂ ಯೇಸುವಿನ ಶರೀರಕ್ಕೆಲೇಪಿಸಲು ಸುಗಂಧದ್ರವ್ಯಗಳನ್ನು ಕೊಂಡುಕೊಂಡರು. 2ವಾರದ ಮೊದಲನೆಯ ದಿನ ನಸುಕಿನಲ್ಲಿ ಸೂರ್ಯನು ಉದಯಿಸುವ ಸಮಯದಲ್ಲಿ ಅವರು ಸಮಾಧಿಯ ಬಳಿಗೆ ಬಂದರು, 3ಅವರು,
ಸಮಾಧಿಯ ಬಾಗಲನ್ನು ಮುಚ್ಚಿದ್ದ ಕಲ್ಲನ್ನು ನಮಗಾಗಿ ಉರುಳಿಸಿ ಕೊಡುವವರು ಯಾರು?”
ಎಂದು ಅವರು ತಮ್ಮತಮ್ಮಲ್ಲೇ ಮಾತನಾಡಿಕೊಂಡರು. 4ಸಮಾಧಿಯನ್ನು ಮುಚ್ಚಿದ್ದ ಕಲ್ಲು ಬಹಳ ದೊಡ್ಡದಾಗಿತ್ತು. ಆದರೆ ಅವರು ಸಮಾಧಿಯನ್ನುನೋಡಿದಾಗ ಕಲ್ಲು ಉರುಳಿರುವುದನ್ನು ಕಂಡರು. 5ಅವರು ಸಮಾಧಿಯೊಳಕ್ಕೆ ಪ್ರವೇಶಿಸಿದಾಗ ಉದ್ದವಾದ ಬಿಳಿ ಉಡುಪನ್ನು ತೊಟ್ಟುಕೊಂಡಿದ್ದಯುವಕನೋರ್ವನು ಅಲ್ಲಿ ಬಲಗಡೆ ಕುಳಿತಿರುವುದನ್ನು ಕಂಡು ಭಯಭ್ರಾಂತರಾದರು6ಆದರೆ ಅವನು,
ಭಯಪಡಬೇಡಿರಿ, ಶಿಲುಬೆಗೇರಿಸಿದ್ದ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರಿ ಎಂದು ಬಲ್ಲೆ; ಅವರು ಇಲ್ಲಿಲ್ಲ; ಜೀವಂತರಾಗಿ ಎದ್ದಿದ್ದಾರೆ; ಇದೇ ಅವರನ್ನು ಇಟ್ಟ ಸ್ಥಳ; 7ಈಗ ನೀವು ಹೋಗಿ, ಪೇತ್ರನಿಗೂ ಮಿಕ್ಕ ಶಿಷ್ಯರಿಗೂ, ‘ಯೇಸು ನಿಮಗೆ ಮೊದಲೇ ಹೇಳಿದಂತೆ ನಿಮಗಿಂತ ಮುಂಚಿತವಾಗಿ ಗಲಿಲೇಯಕ್ಕೆ ಹೋಗುವರು; ಅಲ್ಲಿ ನೀವು ಅವರನ್ನು ಕಾಣುವಿರಿ’ ಎಂದು  ಹೇಳಿರಿ
ಎಂದನು. 8ಅವರು ವಿಸ್ಮಿತರಾಗಿ ಭಯದಿಂದ ನಡುಗುತ್ತಾ ಸಮಾಧಿಯಿಂದ ಹೊರಬಂದು ಬೇಗನೆಅಲ್ಲಿಂದ ಹೊರಟು ಹೋದರು. ಅವರು ಹೆದರಿದ್ದ ಕಾರಣ ಯಾರಿಗೂ ಏನನ್ನೂ ಹೇಳಲಿಲ್ಲ.

ಯೇಸುವಿನ ಶವಸಂಸ್ಕಾರ
(ಮತ್ತಾಯ 28:9-10; ಯೊವಾನ್ನ 20:11-18)

9ವಾರದ ಮೊದಲ ದಿನ ಬೆಳಿಗ್ಗೆ ಯೇಸು ಪುನರುತ್ಥಾನರಾಗಿ ಎದ್ದಮೇಲೆ ಮೊಟ್ಟಮೊದಲು ಕಾಣಿಸಿಕೊಂಡದ್ದು ಮಗ್ದಲದ ಮರಿಯಳಿಗೆ. ಅವರು ಹಿಂದೆ ಆಕೆಯಿಂದ ಏಳು ದೆವ್ವಗಳನ್ನು ಬಿಡಿಸಿದ್ದರು. 10ಆಕೆಯು ಹೋಗಿ ಇನ್ನೂ ಶೋಕಸಾಗರದಲ್ಲೇ ಇದ್ದ ಯೇಸುವಿನ ಸಂಗಡಿಗರಿಗೆಹೇಳಿದಳು. 11ಆದರೆ ಯೇಸುವು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದರೂ ಅದನ್ನು ನಂಬಲಿಲ್ಲ.

ಶಿಷ್ಯರಿಬ್ಬರಿಗೆ ದರ್ಶನ
(ಲೂಕ ೨೪:೧೩-೩೫)

 12ಇದಾದ ಬಳಿಕ ಗ್ರಾಮವೊಂದರತ್ತ ನಡೆದುಹೋಗುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸು ಕಾಣಿಸಿಕೊಂಡರು. 13ಅವರು ಹಿಂದಿರುಗಿ ಬಂದು ಉಳಿದವರಿಗೂ ಅದನ್ನು ತಿಳಿಸಿದರು; ಆದರೆ ಅದನ್ನು ಅವರು ನಂಬದೇ ಹೋದರು.

ಪ್ರೇಷಿತರಿಗೆ ಕೊಟ್ಟ ದರ್ಶನ ಹಾಗೂ ಆದೇಶ
(ಮತ್ತಾಯ ೨೮:೧೬-೨೦; ಲೂಕ ೨೪:೩೬-೪೯; ಯೊವಾನ್ನ ೨೦:೧೯-೨೩; ಪ್ರೇ.ಕಾ. ೧:೬-೮)


14ಅನಂತರ ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕುಳಿತಿದ್ದಾಗ ಯೇಸುವು ಅವರಿಗೆ ಕಾಣಿಸಿಕೊಂಡರು. ತಾವು ಪುನರುತ್ಥಾನ ಹೊಂದಿದ ಬಳಿಕ ತಮ್ಮನ್ನು ಕಂಡವರ ಮಾತನ್ನು ಅವರು ನಂಬಲಿಲ್ಲವಾದ ಕಾರಣ ಅವರ ಅವಿಶ್ವಾಸವನ್ನೂ, ಹೃದಯದ ಕಾಠಿಣ್ಯವನ್ನೂ ಯೇಸು ಖಂಡಿಸಿದರು. 15ಬಳಿಕ ಅವರಿಗೆ,
ನೀವು ವಿಶ್ವದ ಎಲ್ಲೆಡೆಗೂ ಹೋಗಿ ಜಗತ್ತಿಗೆ ಶುಭಸಂದೇಶವನ್ನು ಸಾರಿರಿ. 16ವಿಶ್ವಾಸಿಸಿ ದೀಕ್ಷಾಸ್ನಾನ* ಮಾಡಿಸಿಕೊಳ್ಳುವವನು ಜೀವೋದ್ಧಾರ ಹೊಂದುವನು. ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು. 17ವಿಶ್ವಾಸಿಸುವುದರಿಂದ ಅದ್ಭುತಕಾರ್ಯಗಳು ಉಂಟಾಗುವವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತನಾಡುವರು; 18ಅವರುಕೈಗಳಿಂದ ಸರ್ಪಗಳನ್ನು ಎತ್ತಿದರೂ; ವಿಷಪದಾರ್ಥಗಳೇನನ್ನಾದರು ಕುಡಿದರೂ ಅದು ಅವರಿಗೆ ಯಾವ ಕೇಡನ್ನೂ ಮಾಡುವುದಿಲ್ಲ; ಅವರು ರೋಗಿಗಳ ಮೇಲೆ ಕೈಗಳನ್ನಿಟ್ಟರೆ ಅವರು ಗುಣಮುಖರಾಗುವರು
ಎಂದು ಯೇಸು ಹೇಳಿದರು.


ಸ್ವರ್ಗಾರೋಹಣ
(ಲೂಕ ೨೪:೫೦-೫೩; ಪ್ರೇ.ಕಾ. ೧:೯-೧೧)


19ಶಿಷ್ಯರು ಎಲ್ಲಡೆಯಲ್ಲಿಯೂ ಶುಭಸಂದೇಶಗಳನ್ನು ಸಾರತೊಡಗಿದರು. ಪ್ರಭು ಯೇಸುವು ಅವರೊಂದಿಗೆ ಕೆಲಸಕಾರ್ಯಗಳನ್ನು ಮಾಡುತ್ತಾ ಅನೇಕ ಅದ್ಭುತಕಾರ್ಯಗಳನ್ನು ಮಾಡುವುದರ ಮುಖಾಂತರ ಶುಭಸಂದೇಶವನ್ನು ಸ್ಥಿರಪಡಿಸುತ್ತಾ ಇದ್ದರು.


ಸಂಕ್ಷಿಪ್ತ ಸಮಾಪ್ತಿ

[** ಮಹಿಳೆಯರು ಹೋಗಿ ತಾವು ಕೇಳಿದ್ದೆಲ್ಲವನ್ನೂ ಪೇತ್ರನಿಗೂ ಆತನ ಸಂಗಡಿಗರಿಗೂ ಸಣಕ್ಷಿಪ್ತವಾಗಿ ತಿಳಿಸಿದರು. ಅನಂತರ ಯೇಸುವು ಸ್ವತಃ ತಮ್ಮ ಶುಭಸಂದೇಶವನ್ನು ಶಿಷ್ಯರ ಮೂಲಕ ಜಗತ್ತಿನಲ್ಲೆಡೆ ಹರಡುವಂತೆ ಮಾಡಿದರು. ಶಾಶ್ವತ ಜೀವೋದ್ಧಾರವನ್ನೀಯುವ ಶುಭಸಂದೇಶವು ಪವಿತ್ರ ಹಾಗೂ ಚಿರಂತನವಾದುದು].

* ಅಥವಾ: ಜ್ಞಾನಸ್ನಾನ
**ಕೆಲವು ಮೂಲ ಪ್ರತಿಗಳಲ್ಲಿರುವ ಇನ್ನೊಂದು ಮುಕ್ತಾಯ ವಚನಗಳು.








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ