ಅಧ್ಯಾಯ 8

ಮಾರ್ಕನು ಬರೆದ ಸುಸಂದೇಶಗಳು


ನಾಲ್ಕು ಸಾವಿರ ಜನರಿಗೆ ಯೇಸು ಊಟಮಾಡಿಸಿದ್ದು
(ಮತ್ತಾಯ 15:32-39)

1ಆ ದಿವಸಗಳಲ್ಲಿ ಜನರು ಪುನಃ ಗುಂಪುಗೂಡಿ ಯೇಸುವನ್ನು ಹಿಂಬಾಲಿಸಿ ಬಂದಾಗ ಅವರಿಗೆ ಊಟಕ್ಕೆ ಏನೂ ಇರದ ಕಾರಣ ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ,
2"ಈ ಜನರನ್ನು ನೋಡಿ ನನಗೆ ಕನಿಕರವಾಗುತ್ತಿದೆ. ಮೂರು ದಿನಗಳಿಂದ ಇವರು ನನ್ನೊಂದಿಗಿದ್ದಾರೆ. ಇವರಿಗೆ ಊಟಕ್ಕೇನೂ ಇಲ್ಲ. 3ನಾನು ಅವರನ್ನು ಬರಿ ಹೊಟ್ಟೆಯಲ್ಲಿ ಅವರ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಅವರು ಬಳಲಿ ಬಿದ್ದು ಹೋಗುವರು; ಅವರಲ್ಲಿ ಕೆಲವರು ಬಹುದೂರದಿಂದ ಬಂದಿದ್ದಾರೆ,"
ಎಂದರು. 4ಅದಕ್ಕೆ ಅವರ ಶಿಷ್ಯರು ಪ್ರತ್ಯುತ್ತರವಾಗಿ,
"ಈ ಅಡವಿಯಲ್ಲಿ ಅವರಿಗೆ ಎಲ್ಲಿಂದ ತಾನೇ ತಿನ್ನಲು ರೊಟ್ಟಿಯನ್ನು ತಂದುಕೊಡಲು ಸಾಧ್ಯ?”
ಎಂದರು. 5ಯೇಸುವು ಅವರಿಗೆ,
"ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?"
ಎಂದು ಕೇಳಿದ್ದಕ್ಕೆ ಅವರು,
"ಏಳು ರೊಟ್ಟಿಗಳು ಇವೆ,"
ಎಂದರು. 6ಆಗ ಯೇಸುವು ಆ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆ ಕೊಟ್ಟು, ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು ಜನರಿಗೆ ಹಂಚುವುದಕ್ಕಾಗಿ ತಮ್ಮ ಶಿಷ್ಯರಿಗೆ ಕೊಟ್ಟರು; ಅವರು ಅವುಗಳನ್ನು ಜನರಿಗೆ ಹಂಚಿದರು. 7ಇದೂ ಅಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳೂ ಇದ್ದವು; ಯೇಸುವು ಅವುಗಳನ್ನೂ ಆಶೀರ್ವದಿಸಿ ಅವರಿಗೆ ಹಂಚುವಂತೆ ಆಜ್ಞಾಪಿಸಿದರು. 8ಅವರೆಲ್ಲರೂ ತಿಂದು ತೃಪ್ತರಾದರು; ಮುರಿದ ಮಿಕ್ಕ ತುಂಡುಗಳನ್ನು ಅವರು ಏಳು ಬುಟ್ಟಿಗಳಲ್ಲಿ ತುಂಬಿದರು. 9ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ; ಬಳಿಕ ಯೇಸುವು ಅವರನ್ನು ಕಳುಹಿಸಿಬಿಟ್ಟರು. 10ಕೂಡಲೆ ಅವರು ತಮ್ಮ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿ ದಲ್ಮನೂಥ ಪ್ರಾಂತ್ಯಕ್ಕೆ ಬಂದರು.

ಯೇಸುವು ಯೆಹೂದ್ಯ ಮತಾಭಿಮಾನಿಗಳ ವಿಷಯವಾಗಿ ನೀಡಿದ ಎಚ್ಚರಿಕೆ
(ಮತ್ತಾಯ 16:1-12; ಲೂಕ 11:16; 12:1; ಯೊವಾನ್ನ 6:30)

11ಆಗ ಫರಿಸಾಯರು ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಆಕಾಶದಲ್ಲಿ ತಮಗಾಗಿ ಒಂದು ಸೂಚಕ ಕಾರ್ಯವನ್ನು ಮಾಡಬೇಕೆಂದು ಕೇಳಿ ಅವರೊಂದಿಗೆ ಮಾತನಾಡಲು ಆರಂಭಿಸಿದರು. 12ಯೇಸುವು ತಮ್ಮ ಮನಸ್ಸಿನಲ್ಲೇ ನೊಂದು ದೀರ್ಘ ನಿಟ್ಟುಸಿರುಬಿಟ್ಟು,
"ಈ ಸಂತತಿಯು ಸೂಚಕಕಾರ್ಯವನ್ನು ಅಪೇಕ್ಷಿಸುವುದು ಯಾಕೆ? ನಿಮಗೆ ಸತ್ಯವಾಗಿ ಹೇಳುತ್ತೇನೆ ಇವರಿಗೆ ಯಾವ ಸೂಚಕಕಾರ್ಯವೂ ಸಿಕ್ಕುವುದಿಲ್ಲ,"
ಎಂದು ಹೇಳಿ, 13ಯೇಸುವು ಅವರನ್ನು ಬಿಟ್ಟು ದೋಣಿಯನ್ನು ಹತ್ತಿ ಆಚೆಯ ದಡಕ್ಕೆ ಹೊರಟುಹೋದರು. 14ಆಗ ಶಿಷ್ಯರು ರೊಟ್ಟಿಯ ಬುತ್ತಿಯನ್ನು ತೆಗೆದುಕೊಳ್ಳುವುದಕ್ಕೆ ಮರೆತಿದ್ದರು; ಅಲ್ಲದೆ ದೋಣಿಯಲ್ಲಿ ಅವರಿಗೆ ಒಂದು ರೊಟ್ಟಿ ಮಾತ್ರ ಇತ್ತು. 15ಯೇಸುವು ಅವರಿಗೆ,
"ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೀವು ಎಚ್ಚರಿಕೆಯಿಂದ ಇರಿ,"
ಎಂದು ಖಂಡಿತವಾಗಿ ಹೇಳಿದರು. 16ಆಗ ಶಿಷ್ಯರು,
"ನಮಗೆ ರೊಟ್ಟಿ ಇಲ್ಲದಿರುವುದರಿಂದಲೇ ಯೇಸುವು ಹೀಗೆ ಹೇಳುತ್ತಿದ್ದಾರೆ,"
ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು. 17ಯೇಸು ಅದನ್ನು ಅರ್ಥಮಾಡಿಕೊಂಡು ಅವರಿಗೆ,
"ನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ನೀವೇಕೆ ಮಾತನಾಡಿಕೊಳ್ಳುವಿರಿ? ನೀವಿನ್ನೂ ಅರ್ಥಮಾಡಿಕೊಳ್ಳಲಿಲ್ಲವೇ? ನಿಮಗಿನ್ನೂ ತಿಳುವಳಿಕೆ ಬರಲಿಲ್ಲವೇ? ನಿಮ್ಮ ಮನಸ್ಸು ಕಲ್ಲಾಗಿದೆಯೆ? 18ಕಣ್ಣುಗಳಿದ್ದೂ ಕಾಣುವುದಿಲ್ಲವೇ? ಕಿವಿಗಳಿದ್ದೂ ಕೇಳುವುದಿಲ್ಲವೇ? ನಿಮಗೆ ನೆನಪಿಲ್ಲವೇ? 19ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ರೊಟ್ಟಿಯ ತುಂಡುಗಳನ್ನು ಎತ್ತಿದಿರಿ?"
ಎಂದು ಕೇಳಲು ಅವರು ಯೇಸುವಿಗೆ,
"ಹನ್ನೆರಡು ಬುಟ್ಟಿಗಳು,"
ಎಂದರು.
20"ಹಾಗೆಯೇ ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಬುಟ್ಟಿಗಳ ತುಂಬ ತುಂಡುಗಳನ್ನು ಎತ್ತಿದಿರಿ?"
 ಎಂದು ಕೇಳಲು ಅವರು,
"ಏಳು"
ಎಂದರು. 21ಯೇಸುವು ಅವರಿಗೆ,
"ಹಾಗಾದರೆ ನಿಮಗಿನ್ನೂ ಅರ್ಥವಾಗಲಿಲ್ಲವೇ?"
ಎಂದು ಕೇಳಿದರು.

ಕುರುಡನಿಗೆ ಯೇಸುವು ಕಣ್ಣುಗಳನ್ನು ನೀಡಿದ್ದು

22ತರುವಾಯ ಯೇಸುವು ಬೇತ್ಸಾಯಿದ ಎಂಬ ಊರಿಗೆ ಬಂದಾಗ, ಅಲ್ಲಿ ಜನರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ಕರೆತಂದು ಅವನನ್ನು ಮುಟ್ಟಬೇಕೆಂದು ಯೇಸುವನ್ನು ಬೇಡಿಕೊಂಡರು. 23ಯೇಸುವು ಆ ಕುರುಡನ ಕೈಹಿಡಿದು ಊರಿನ ಹೊರಕ್ಕೆ ಕರೆದುಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳಿ ತಮ್ಮ ಕೈಗಳನ್ನು ಅವನ ಮೇಲೆ ಇಟ್ಟು,
"ಏನಾದರೂ ಕಾಣುತ್ತಿದೆಯೇ?"
ಎಂದು ಅವನನ್ನು ಕೇಳಿದರು. 24ಅವನು ತಲೆಯೆತ್ತಿ ನೋಡಿ,
"ನನಗೆ ಮನುಷ್ಯರು ಕಾಣಿಸುತ್ತಾರೆ. ಮರಗಳಂತೆ ಕಾಣಿಸಿದರೂ ಅವರು ನಡೆದಾಡುತ್ತಿದ್ದಾರೆ,"
ಎಂದನು. 25ತರುವಾಯ ಯೇಸುವು ಪುನಃ ಅವನ ಕಣ್ಣುಗಳ ಮೇಲೆ ತಮ್ಮ ಕೈಗಳನ್ನಿಟ್ಟರು; ಅವನು ಕಣ್ಣು ಬಿಟ್ಟು ನೋಡಲು ಅವನು ಗುಣಹೊಂದಿದ್ದನು. ಅವನಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. 26ತರುವಾಯ ಯೇಸುವು ಅವನಿಗೆ,
"ನೀನು ಊರಿನೊಳಕ್ಕೆ ಹೋಗುವುದೇನೂ ಬೇಡ,"
ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿಬಿಟ್ಟರು.

ಪೇತ್ರನು ಯೇಸುವನ್ನು 'ಕ್ರಿಸ್ತ'ನೆಂದು ಒಪ್ಪಿಕೊಂಡದ್ದು, ತಮ್ಮ ಮರಣವನ್ನು ಯೇಸುವು ಮುಂತಿಳಿಸಿದ್ದು
(ಮತ್ತಾಯ 16:13-28; ಲೂಕ 9:18-27)

27ತರುವಾಯ ಯೇಸುವೂ ಅವರ ಶಿಷ್ಯರೂ ಸೆಜಾರೆಯ ಫಿಲಿಪ್ಪಿ ಎಂಬ ಪಟ್ಟಣಕ್ಕೆ ಸೇರಿದ ಗ್ರಾಮಗಳಿಗೆ ಹೋದರು. ದಾರಿಯಲ್ಲಿ ಯೇಸುವು ತಮ್ಮ ಶಿಷ್ಯರಿಗೆ,
"ಜನರು ನನ್ನನ್ನು ಯಾರೆಂದು ಹೇಳುತ್ತಾರೆ?"
ಎಂದು ಕೇಳಿದರು. 28ಅವರು ಪ್ರತ್ಯುತ್ತರವಾಗಿ,
"ಸ್ನಾನಿಕ ಯೊವಾನ್ನನು ಎಂದು ಕೆಲವರೂ; ಎಲೀಯನು ಎಂದು ಮತ್ತೆ ಕೆಲವರೂ; ಪ್ರವಾದಿಗಳಲ್ಲಿ ಒಬ್ಬನು ಎಂದು ಇನ್ನೂ ಕೆಲವರು ಹೇಳುತ್ತಾರೆ,"
ಎಂದರು. 29ಅದಕ್ಕೆ ಯೇಸುವು ಅವರಿಗೆ,
"ನೀವು ನನ್ನನ್ನು ಯಾರೆನ್ನುತ್ತೀರಿ?"
ಎಂದು ಕೇಳಲು ಪೇತ್ರನು ಯೇಸುವಿಗೆ,
"ನೀವೇ ಬರಬೇಕಾಗಿರುವ ಕ್ರಿಸ್ತರು"
ಎಂದು ಉತ್ತರಿಸಿದನು. 30ಅದಕ್ಕೆ ಯೇಸುವು,
"ನನ್ನ ವಿಷಯವಾಗಿ ಯಾರಿಗೂ ಏನನ್ನೂ ಹೇಳಬೇಡಿರಿ,"
ಎಂದು ಅವರಿಗೆ ಖಂಡಿತವಾಗಿ ಹೇಳಿದರು. 31ನಂತರ,
"ನರಪುತ್ರನು ಅನೇಕ ಕಷ್ಟಗಳನ್ನು ಅನುಭವಿಸಿ ಹಿರಿಯರಿಂದಲೂ, ಪ್ರಧಾನ ಯಾಜಕರಿಂದಲೂ, ಧರ್ಮಶಾಸ್ತ್ರಿಗಳಿಂದಲೂ ನಿರಾಕೃತನಾಗಿ ಕೊಲ್ಲಲ್ಪಟ್ಟು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರಬೇಕಾಗಿದೆ,"
ಎಂದು ತಮ್ಮ ಶಿಷ್ಯರಿಗೆ ಬೋಧಿಸಲಾರಂಭಿಸಿದರು. 32ಆ ಮಾತನ್ನು ಯೇಸುವು ಸ್ಪಷ್ಟವಾಗಿ ಹೇಳಿದ್ದರಿಂದ ಪೇತ್ರನು ಅವರ ಕೈ ಹಿಡಿದು ಪ್ರತಿಭಟಿಸಲಾರಂಭಿಸಿದನು. 33ಯೇಸುವು ತಮ್ಮ ಶಿಷ್ಯರನ್ನು ಹಿಂತಿರುಗಿ ನೋಡಿ ಪೇತ್ರನಿಗೆ,
"ಸೈತಾನನೇ ನನ್ನ ಮುಂದೆ ನಿಲ್ಲಬೇಡ; ತೊಲಗು; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ,"
ಎಂದು ಗದರಿದರು. 34ಆಮೇಲೆ ಅವರು ತಮ್ಮ ಶಿಷ್ಯರ ಜೊತೆಗೆ ಜನರನ್ನು ತಮ್ಮ ಬಳಿಗೆ ಕರೆದು ಅವರಿಗೆ,
"ಯಾರಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಿ ಬರಲಿ. 35ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿಯೂ, ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು. 36ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನ ಪ್ರಾಣವನ್ನು ಕಳೆದುಕೊಂಡರೆ ಅವನಿಗಾಗುವ ಪ್ರಯೋಜನವೇನು? 37ಒಬ್ಬನು ತನ್ನ ಪ್ರಾಣಕ್ಕೆ ಸರಿಸಮನಾಗಿ ಏನನ್ನು ಕೊಡಬಲ್ಲ? 38ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಠ ಸಂತತಿಯಲ್ಲಿ ಯಾರು ನನಗೆ ಮತ್ತು ನನ್ನ ಮಾತುಗಳಿಗೆ ನಾಚಿಕೆಯನ್ನು ತೋರುವನೋ ಆತನ ವಿಷಯದಲ್ಲಿ ನರಪುತ್ರನೂ ಸಹ ತನ್ನ ತಂದೆಯ ಮಹಿಮೆಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿಕೆಯನ್ನು ತೋರುವನು,"
ಎಂದು ಹೇಳಿದರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ