ಅಧ್ಯಾಯ 9

ಮಾರ್ಕನು ಬರೆದ ಸುಸಂದೇಶಗಳು


ಯೇಸು ಪ್ರಕಾಶರೂಪವನ್ನು ತಾಳಿದ್ದು
(ಮತ್ತಾಯ 17:1-13; ಲೂಕ 9:28-36)

1ಅನಂತರ ಯೇಸುವು ತಮ್ಮ ಶಿಷ್ಯರಿಗೆ, "ನಿಮಗೆ ನಿಜವಾಗಿ ಹೇಳುತ್ತೇನೆ. ದೇವರ ರಾಜ್ಯವು ಸರ್ವಬಲದೊಂದಿಗೆ ಬರುವುದನ್ನು ನೋಡುವ ತನಕ ಇಲ್ಲಿರುವವರಲ್ಲಿ ಕೆಲವರು ಮರಣಹೊಂದುವುದಿಲ್ಲ," ಎಂದರು
2ಆರು ದಿನಗಳಾದ ಬಳಿಕ ಯೇಸುವು ಪೇತ್ರ, ಯಕೋಬ ಮತ್ತು ಯೊವಾನ್ನರನ್ನು ತಮ್ಮೊಂದಿಗೆ ಪ್ರತ್ಯೇಕವಾಗಿ ಕರೆದುಕೊಂಡು ಎತ್ತರವಾದ ಬೆಟ್ಟದ ಒಂದು ಏಕಾಂತ ಸ್ಥಳಕ್ಕೆ ಹೋದರು; ಅಲ್ಲಿ ಶಿಷ್ಯರ ಕಣ್ಣ ಮುಂದೆಯೇ ಅವರು ರೂಪಾಂತರಗೊಂಡರು. 3ಅವರ ಉಡುಪು ಭೂಲೋಕದ ಯಾವ ಅಗಸನೂ ಮಾಡಲಾಗದಷ್ಟು ಬೆಳ್ಳಗೆ ಹೊಳೆಯುತ್ತಿತ್ತು. 4ಆಗ ಅಲ್ಲಿ 'ಎಲೀಯ'ನು 'ಮೋಶೆ'ಯೊಂದಿಗೆ ಅವರಿಗೆ ಕಾಣಿಸಿಕೊಂಡನು. ಅವರು ಯೇಸುವಿನೊಂದಿಗೆ ಮಾತನಾಡುತ್ತಿದ್ದರು. 5ಆಗ ಪೇತ್ರನು ಯೇಸುವಿಗೆ,
"ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನಿಮಗೂ, ಮೋಶೆಗೂ ಮತ್ತು ಎಲೀಯನಿಗೂ ಒಂದೊಂದರಂತೆ ಮೂರು ಗುಡಾರಗಳನ್ನು ನಾವಿಲ್ಲಿ ಕಟ್ಟುವೆವು,"
ಎಂದು ಹೇಳಿದನು. 6ಅವರು ಬಹಳವಾಗಿ ಹೆದರಿದ್ದರಿಂದ ಪೇತ್ರನು ಏನು ಮಾತನಾಡಬೇಕೆಂಬುದು ತಿಳಿಯದೆ ಮಾತನಾಡಿದ್ದನು; . 7ಆಗ ಒಂದು ಮೋಡವು ಅವರನ್ನು ಕವಿದುಕೊಂಡಿತು; ಮೋಡದೊಳಗಿನಿಂದ,
"ಈತನು ನನ್ನ ಪ್ರಿಯ ಕುಮಾರನು; ಈತನ ಮಾತನ್ನು ಕೇಳಿರಿ,"
ಎಂದು ಆಕಾಶವಾಣಿಯಾಯಿತು. 8ತಕ್ಷಣವೇ ಅವರು ಸುತ್ತಲೂ ನೋಡಿದಾಗ ತಮ್ಮೊಂದಿಗೆ ಯೇಸುವನ್ನು ಹೊರತುಪಡಿಸಿ ಬೇರೆ ಯಾರನ್ನೂ ಕಾಣಲಿಲ್ಲ
9ಅವರು ಬೆಟ್ಟದಿಂದಿಳಿದು ಬರುವಾಗ ಯೇಸುವು ಅವರಿಗೆ,
"ನರಪುತ್ರನು ಸತ್ತು ಜೀವಂತನಾಗಿ ಎದ್ದು ಬರುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬಾರದು,"
ಎಂದು ಕಟ್ಟಾಜ್ಞೆ ಮಾಡಿದರು. 10ಶಿಷ್ಯರು, ಸತ್ತು ಜೀವಂತನಾಗಿ ಎದ್ದು ಬರುವುದರ ಅರ್ಥವೇನೆಂದು ತಿಳಿಯದೆ ತಮ್ಮ ತಮ್ಮೊಳಗೆ ಮಾತನಾಡಿಕೊಂಡರು. 11ಅನಂತರ ಅವರು ಯೇಸುವಿಗೆ,
"ಎಲೀಯನು ಮೊದಲು ಬರುವುದು ಅಗತ್ಯವೆಂದು ಧರ್ಮಶಾಸ್ತ್ರಿಗಳು ಏಕೆ ಹೇಳುತ್ತಾರೆ?"
ಎಂದು ಕೇಳಿದರು. 12ಅದಕ್ಕೆ ಯೇಸುವು ಅವರಿಗೆ ಪ್ರತ್ಯುತ್ತರವಾಗಿ,
"ನಿಜವಾಗಿಯೂ ಎಲೀಯನು ಮೊದಲು ಬಂದು ಎಲ್ಲವುಗಳನ್ನು ಯಥಾಸ್ಥಿತಿಗೆ ತರುತ್ತಾನೆ ಎನ್ನುವುದು ನಿಜ; ಆದರೆ ನರಪುತ್ರನ ವಿಷಯದಲ್ಲಿ, ಅವನು ಬಹುಕಷ್ಟವನ್ನನುಭವಿಸಿ ಹೀನೈಸಲ್ಪಡಬೇಕಾಗಿದೆಯೆಂದು ಧರ್ಮಶಾಸ್ತ್ರದಲ್ಲಿ ಬರೆದಿರುವುದು ಹೇಗೆ? 13ನಾನು ನಿಮಗೆ ಹೇಳುವುದೇನೆಂದರೆ, ಎಲೀಯನು ನಿಜವಾಗಿಯೂ ಬಂದನು. ಅವನ ವಿಷಯವಾಗಿಯೂ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆಯೇ ಜನರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರು,"
ಎಂದರು

ಯೇಸು ಮೂರ್ಛಾರೋಗಿಯನ್ನು ಗುಣಪಡಿಸಿದ್ದು
(ಮತ್ತಾಯ 17:14-21; ಲೂಕ 9:37-42)

14ತರುವಾಯ ಯೇಸುವು ತಮ್ಮ ಉಳಿದ ಶಿಷ್ಯರ ಬಳಿಗೆ ಹಿಂದಿರುಗಿ ಬಂದಾಗ ಅವರ ಸುತ್ತಲೂ ದೊಡ್ಡ ಜನಸಮೂಹವೂ, ಧರ್ಮಶಾಸ್ತ್ರಿಗಳು ನೆರೆದು ಅವರೊಂದಿಗೆ ತರ್ಕ ಮಾಡುತ್ತಿರುವುದನ್ನು ಕಂಡರು. 15ಕೂಡಲೆ ಅಲ್ಲಿದ್ದ ಜನರೆಲ್ಲರೂ ಯೇಸುವನ್ನು ಕಂಡು ಬಹು ಸಂತೋಷದಿಂದ ಓಡುತ್ತಾ ಬಂದು ಅವರನ್ನು ವಂದಿಸಿದರು. 16ಆಗ ಯೇಸುವು ಧರ್ಮಶಾಸ್ತ್ರಿಗಳಿಗೆ,
"ನೀವು ಇವರೊಂದಿಗೆ ಏನನ್ನು ತರ್ಕಮಾಡುತ್ತಿರುವಿರಿ?"
ಎಂದು ಕೇಳಿದರು. 17ಆಗ ಜನಸಮೂಹದಲ್ಲಿದ್ದ ಒಬ್ಬನು ಪ್ರತ್ಯುತ್ತರವೆಂಬಂತೆ,
"ಬೋಧಕರೇ, ನನ್ನ ಮಗನಿಗೆ ಮೂಕದೆವ್ವ ಹಿಡಿದ ಕಾರಣ ನಿಮ್ಮ ಬಳಿಗೆ ತೆಗೆದುಕೊಂಡು ಬಂದಿರುವೆನು. 18ಅವನನ್ನು ಕರೆದುಕೊಂಡು ಹೋದಡೆಯಲ್ಲೆಲ್ಲಾ ಅದು ಅವನನ್ನು ಪೀಡಿಸುತ್ತಿದೆ; ಅವನು ನೊರೆ ಸುರಿಸುತ್ತಾ ತನ್ನ ಹಲ್ಲು ಕಡಿಯುತ್ತಾ ನಲುಗಿ ಹೋಗುತ್ತಿದ್ದಾನೆ; ಅದನ್ನು ಬಿಡಿಸಬೇಕೆಂದು ನಾನು ನಿಮ್ಮ ಶಿಷ್ಯರಿಗೆ ಹೇಳಿದೆ; ಆದರೆ ಅವರಿಂದ ಅದು ಸಾಧ್ಯವಾಗಲಿಲ್ಲ,"
ಎಂದು ಹೇಳಿದನು. 19ಅದಕ್ಕೆ ಯೇಸುವು,
"ನಂಬಿಕೆಯಿಲ್ಲದ ಸಂತಾನವೇ, ಎಷ್ಟು ಕಾಲ ನಾನು ನಿಮ್ಮೊಂದಿಗೆ ಇರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,"
ಎಂದು ಹೇಳಿದರು. 20ಆಗ ಜನರು ಅವನನ್ನು ಯೇಸುವಿನ ಬಳಿಗೆ ಕರೆತಂದರು; ಯೇಸುವು ಆತನನ್ನು ನೋಡಿದ ತಕ್ಷಣವೇ ಆತ್ಮವು ಅವನನ್ನು ಒದ್ದಾಡಿಸಿದ್ದರಿಂದ ಅವನು ನೆಲಕ್ಕೆ ಬಿದ್ದು ನೊರೆ ಸುರಿಸುತ್ತಾ ಹೊರಳಾಡಿದನು. 21ಯೇಸುವು ಅವನ ತಂದೆಗೆ,
"ಇದು ಅವನನ್ನು ಹಿಡಿದು ಎಷ್ಟು ಕಾಲವಾಯಿತು?"
ಎಂದು ಕೇಳಲು ಅವನು,
"ಬಾಲ್ಯದಿಂದಲೇ, 22ಅದು ಅವನನ್ನು ನಾಶಮಾಡಲು ಅನೇಕ ಸಲ ಬೆಂಕಿಯೊಳಗೂ, ನೀರಿನೊಳಗೂ ಹಾಕಿತು; ನಿಮ್ಮಂದ ಸಾಧ್ಯವಿದ್ದರೆ ನಮ್ಮ ಮೇಲೆ ಕರುಣೆಯಿಟ್ಟು ನಮಗೆ ಸಹಾಯ ಮಾಡಿರಿ,"
ಎಂದನು. 23ಆಗ ಯೇಸುವು ಅವನಿಗೆ,
"ನಿಮ್ಮಂದ ಸಾಧ್ಯವಿದ್ದರೆ ಎನ್ನುತ್ತೀಯಾ. ನಿನಗೆ ನಂಬಿಕೆಯಿದ್ದರೆ ಆಗುವುದು; ನಂಬುವವನಿಗೆ ಎಲ್ಲವು ಸಾಧ್ಯ!"
ಎಂದು ಹೇಳಿದರು. 24ತಕ್ಷಣವೇ ಮಗನ ತಂದೆಯು,
"ಸ್ವಾಮಿ, ನಾನು ನಂಬುತ್ತೇನೆ; ನನಗೆ ನಂಬಿಕೆ ಕಡಿಮೆಯಾದರೂ ಸಹ ನೀವು ಸಹಾಯ ಮಾಡಿ,"
ಎಂದು ಕಣ್ಣೀರಿನಿಂದ ಕೂಗಿ ಹೇಳಿದನು. 25ಆಗ ಯೇಸು ಜನರ ಗುಂಪೊಂದು ಓಡಿ ಬರುತ್ತಿರುವುದನ್ನು ನೋಡಿ ದೆವ್ವವನ್ನು ಗದರಿಸಿ ಅದಕ್ಕೆ,
 "ಮೂಕ ಮತ್ತು ಕಿವುಡ ದೆವ್ವವೇ, ನೀನು ಅವನೊಳಗಿಂದ ಹೊರಗೆ ಬಾ; ಇನ್ನೆಂದಿಗೂ ಅವನೊಳಕ್ಕೆ ಸೇರದಿರು ಎಂದು ನಾನು ನಿನಗೆ ಆಜ್ಞಾಪಿಸುತ್ತೇನೆ,"
ಎಂದರು. 26ಆಗ ದೆವ್ವವು ಅಬ್ಬರಿಸಿ, ಹುಡುಗನನ್ನು ಬಹಳವಾಗಿ ಒದ್ದಾಡಿಸಿ ಅವನೊಳಗಿನಿಂದ ಹೊರಕ್ಕೆ ಬಂತು; ಹುಡುಗನು ಸತ್ತವನ ಹಾಗೆ ಬಿದ್ದಿದ್ದರಿಂದ ಅನೇಕರು ಅವನು ಸತ್ತಿದ್ದಾನೆ ಎಂದುಕೊಂಡರು. 27ಆದರೆ ಯೇಸು ಅವನ ಕೈ ಹಿಡಿದು ಮೇಲಕ್ಕೆತ್ತಲು ಅವನು ಎದ್ದನು. 28ಯೇಸುವು ಮನೆಯೊಳಕ್ಕೆ ಬಂದಾಗ ಶಿಷ್ಯರು ಏಕಾಂತದಲ್ಲಿ ಅವರನ್ನು, " ದೆವ್ವವನ್ನು ಹೊರಕ್ಕೆ ಹಾಕಲು ನಮ್ಮಿಂದೇಕೆ ಸಾಧ್ಯವಾಗಲಿಲ್ಲ?" ಎಂದು ಕೇಳಿದರು. 29ಯೇಸುವು ಅವರಿಗೆ,
" ಜಾತಿಯು ಪ್ರಾರ್ಥನೆ, ಉಪವಾಸಗಳಿಂದಲ್ಲದೇ ಬೇರೆ ಯಾವುದರಿಂದಲೂ ಹೊರಕ್ಕೆ ಬರಲಾರದು,"
ಎಂದರು

ಯೇಸು ತಮ್ಮ ಮರಣ ಮತ್ತು ಪುನರುತ್ಥಾನವನ್ನು ಮತ್ತೊಮ್ಮೆ ಮುಂತಿಳಿಸಿದ್ದು
(ಮತ್ತಾಯ 17:22, 23; ಲೂಕ 9:43-45)

30ಅಲ್ಲಿಂದ ಅವರು ಹೊರಟು ಗಲಿಲೇಯವನ್ನು ಹಾದುಹೋಗುತ್ತಿದ್ದರು. ಇದು ಯಾರಿಗೂ ತಿಳಿಯಬಾರದೆಂದು ಯೇಸುವಿನ ಮನಸ್ಸಿನಲ್ಲಿತ್ತು. 31ಯೇಸುವು ತಮ್ಮ ಶಿಷ್ಯರಿಗೆ ಬೋಧಿಸುತ್ತಾ,
"ನರಪುತ್ರನು ಜನರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಕೊಂದ ಮೂರು ದಿನಗಳ ಬಳಿಕ ಅವನು ಜೀವಿತನಾಗಿ ಎದ್ದು ಬರುವನು,"
ಎಂದರು. 32ಆದರೆ ಶಿಷ್ಯರು ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ, ಆದರೆ ಬಗ್ಗೆ ಯೇಸುವಿನಲ್ಲಿ ಕೇಳುವುದಕ್ಕೂ ಭಯಪಟ್ಟರು.

ದೀನಭಾವದ ಬಗ್ಗೆ ಶಿಷ್ಯರಿಗಿತ್ತ ಬೋಧನೆ
(ಮತ್ತಾಯ 18:1-9; ಲೂಕ 9:46-50)

33ಯೇಸುವು ಕಪೆರ್ನೌಮಿಗೆ ಬಂದು ಮನೆಯಲ್ಲಿ ತಂಗಿದ್ದಾಗ ಶಿಷ್ಯರಿಗೆ,
"ನೀವು ದಾರಿಯಲ್ಲಿ ಏನು ಮಾತಾಡಿಕೊಳ್ಳುತ್ತಿದ್ದಿರಿ?,"
ಎಂದು ಕೇಳಲು ಅವರು ಸುಮ್ಮನಿದ್ದರು; 34ಏಕೆಂದರೆ ಅವರು ತಮ್ಮೊಳಗೆ ಯಾರು ಅತಿ ದೊಡ್ಡವನಾಗಿರಬೇಕೆಂದು ದಾರಿಯಲ್ಲಿ ವಾಗ್ವಾದ ಮಾಡಿಕೊಂಡಿದ್ದರು. 35ಆಗ ಯೇಸುವು ಕುಳಿತುಕೊಂಡು ಹನ್ನೆರಡು ಮಂದಿ ಶಿಷ್ಯರನ್ನು ಬಳಿಗೆ ಕರೆದು ಅವರಿಗೆ,
"ಯಾರೇ ಆಗಲಿ ಮೊದಲಿನವನಾಗಬೇಕೆಂದು ಇಷ್ಟಪಟ್ಟರೆ ಅವನು ಎಲ್ಲರಿಗಿಂತ ಕಡೆಯವನೂ, ಎಲ್ಲರ ಸೇವಕನೂ ಆಗಿರಬೇಕು,"
ಎಂದರು. 36ಅನಂತರ ಯೇಸುವು ಒಂದು ಮಗುವನ್ನು ತೆಗೆದುಕೊಂಡು ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ ಅದನ್ನು ಅಪ್ಪಿಕೊಂಡು ಅವರಿಗೆ,
 37"ಯಾರಾದರೂ ಇಂಥ ಮಕ್ಕಳಲ್ಲಿ ಒಂದನ್ನು ನನ್ನ ಹೆಸರಿನಲ್ಲಿ ಅಂಗೀಕರಿಸಿದರೆ ಅವರು ನನ್ನನ್ನು ಅಂಗೀಕರಿಸುತ್ತಾನೆ; ಮತ್ತು ಯಾರು ನನ್ನನ್ನು ಅಂಗೀಕರಿಸುವನೋ ಅವನು ನನ್ನನ್ನು ಮಾತ್ರವಲ್ಲದೆ ನನ್ನನ್ನು ಕಳುಹಿಸಿದಾತನನ್ನೂ ಅಂಗೀಕರಿಸುತ್ತಾನೆ,"
ಎಂದರು. 38ಯೊವಾನ್ನನು ಯೇಸುವಿಗೆ,
"ಗುರುವೇ, ಯಾರೋ ಒಬ್ಬಾತ ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವುದನ್ನು ಕಂಡ ನಾವು ಅವನು ನಮಗೆ ಸೇರಿದವನಲ್ಲವಾದುದರಿಂದ ಅವನಿಗೆ ನಾವು ಅಡ್ಡಿಮಾಡಿದೆವು,"
ಎಂದು ಹೇಳಿದನು. 39ಆಗ ಯೇಸುವು,
"ಅವನಿಗೆ ಅಡ್ಡಿಮಾಡಬೇಡಿರಿ; ಏಕೆಂದರೆ ನನ್ನ ಹೆಸರಿನಲ್ಲಿ ಅದ್ಭುತಕಾರ್ಯವನ್ನು ಮಾಡಿ ನನ್ನನ್ನು ದೂಷಿಸುವವನು ಒಬ್ಬನೂ ಇಲ್ಲ. 40ನಮ್ಮನ್ನು ಎದುರಿಸದವನು ನಮ್ಮ ಪಕ್ಷದವನೇ ಆಗಿದ್ದಾನೆ. 41ಅಲ್ಲದೆ ನೀವು ಕ್ರಿಸ್ತನಿಗೆ ಸೇರಿದವನಾದುದರಿಂದ ಯಾರಾದರೂ ನನ್ನ ಹೆಸರಿನಲ್ಲಿ ನಿಮಗೆ ಒಂದು ತಂಬಿಗೆ ನೀರನ್ನು ಕೊಟ್ಟರೆ ಅವನು ತನ್ನ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 42ನನ್ನನ್ನು ನಂಬುವ ಚಿಕ್ಕವರಲ್ಲಿ ಒಬ್ಬನಿಗೆ ಯಾರಾದರೂ ಅಡ್ಡಿಯಾದರೆ ಅಂತಹವರ ಕೊರಳಿಗೆ ಬೀಸುವ ಕಲ್ಲನ್ನು ತೂಗುಹಾಕಿ ಅವರನ್ನು ಸಮುದ್ರಕ್ಕೆಸೆದು ಬಿಡುವುದೇ ಅವನಿಗೆ ಲೇಸು. 43ಅಲ್ಲದೇ ನಿನ್ನ ಕೈ ನಿನ್ನನ್ನು ಪಾಪ ಮಾಡಲು ಪ್ರೇರೇಪಣೆ ಮಾಡಿದರೆ ಅದನ್ನು ಕಡಿದುಹಾಕು; 44ಏಕೆಂದರೆ ಎರಡು ಕೈಗಳಿರುವವನಾಗಿ ಎಂದಿಗೂ ಆರದ ನರಕದ ಬೆಂಕಿಯೊಳಗೆ ಬೇಯುವುದಕ್ಕಿಂತ, ಅಂಗಹೀನನಾಗಿ ಜೀವದಲ್ಲಿರುವುದು ನಿನಗೆ ಒಳ್ಳೆಯದು; 45ನಿನ್ನ ಕಾಲು ನಿನ್ನನ್ನು ಪಾಪ ಮಾಡಲು ಪ್ರೇರೇಪಣೆ ಮಾಡಿದರೆ ಅದನ್ನು ಕಡಿದುಹಾಕು; 46ಏಕೆಂದರೆ ಎರಡು ಕಾಲುಗಳಿರುವವನಾಗಿ ಎಂದಿಗೂ ಆರದ ನರಕದ ಬೆಂಕಿಯೊಳಗೆ ಬೇಯುವುದಕ್ಕಿಂತ, ಅಂಗಹೀನನಾಗಿ ಜೀವದಲ್ಲಿರುವುದು ನಿನಗೆ ಒಳ್ಳೆಯದು; 47ನಿನ್ನ ಕಣ್ಣು ನಿನ್ನನ್ನು ಪಾಪ ಮಾಡಲು ಪ್ರೇರೇಪಣೆ ಮಾಡಿದರೆ ಅದನ್ನು ಕಿತ್ತುಹಾಕು; 48ಎರಡು ಕಣ್ಣುಗಳುಳ್ಳವನಾಗಿ ನರಕದ ಬೆಂಕಿಯಲ್ಲಿ ಬೇಯುವುದಕ್ಕಿಂತ ಒಂದು ಕಣ್ಣುಳ್ಳವನಾಗಿ ದೇವರ ರಾಜ್ಯದಲ್ಲಿ ನೆಲೆಸುವುದು ನಿನಗೆ ಒಳ್ಳೆಯದು. 49 ಪ್ರತಿಯೊಬ್ಬನಿಗೂ ಬೆಂಕಿಯೆಂಬ ಉಪ್ಪಿನ ಹದವನ್ನು ಕೊಡಬೇಕು; 50ಉಪ್ಪು ಒಳ್ಳೆಯದು; ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ ಬೇರೆ ಯಾವುದರಿಂದ ನೀವು ರುಚಿಯನ್ನು ಪಡೆಯುವಿರಿ? ನಿಮ್ಮೊಳಗೆ ಉಪ್ಪು ಇರಲಿ; ಮತ್ತು ಒಬ್ಬರಿಗೊಬ್ಬರು ಸಮಾಧಾನದಿಂದಿರಿ,"
ಎಂದರು.   



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ