ಅಧ್ಯಾಯ 10

ಮಾರ್ಕನು ಬರೆದ ಸುಸಂದೇಶಗಳು


ಹೆಂಡತಿಯ ಪರಿತ್ಯಾಗದ ವಿಷಯದಲ್ಲಿ ಯೇಸುವಿನ ಉತ್ತರ
(ಮತ್ತಾಯ 19:1-9; ಲೂಕ 16:18)

1ಯೇಸುವು ಅಲ್ಲಿಂದ ಎದ್ದು ಜೋರ್ಡನ್ಹೊಳೆಯ ಆಚೆಗಿರುವ ಜುದೇಯ ಪ್ರಾಂತ್ಯಕ್ಕೆ ಬಂದರು; ಜನರು ಪುನಃ ಅವರ ಬಳಿಗೆ ಧಾವಿಸಿ ಬರುತ್ತಿರಲು ವಾಡಿಕೆಯಂತೆ ಯೇಸುವು ಅವರಿಗೆ ಬೋಧಿಸಿದರು. 2ಆಗ ಯೇಸುವಿನ ಬಳಿಗೆ ಬಂದ ಫರಿಸಾಯರು ಅವರನ್ನು ಪರೀಕ್ಷಿಸುವ ಉದ್ದೇಶದಿಂದ,
 "ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟು ಬಿಡುವುದು ಧರ್ಮವೋ ಹೇಗೆ?"
ಎಂದು ಕೇಳಿದರು. 3ಯೇಸುವು ಅವರಿಗೆ ಪ್ರತ್ಯುತ್ತರವಾಗಿ,
"ಮೋಶೆಯು ನಿಮಗೇನು ಆಜ್ಞೆಯನ್ನು ಕೊಟ್ಟಿರುವನು?"
ಎಂದು ಕೇಳಿದರು. 4ಅದಕ್ಕೆ ಅವರು,
"ತ್ಯಾಗಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟು ಬಿಡಬೇಕೆಂದು ಮೋಶೆಯ  ಆಜ್ಞೆಯಿದೆ,"
ಎಂದರು. 5ಯೇಸು ಅವರಿಗೆ ಪ್ರತ್ಯುತ್ತರವಾಗಿ,
"ಅವನು ನಿಮ್ಮ ಹೃದಯದ ಕಾಠಿಣ್ಯದ ಕಾರಣದಿಂದಾಗಿ ನಿಮಗೆ ಆಜ್ಞೆಯನ್ನು ಬರೆದಿರುವನು. 6ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು ಗಂಡು-ಹೆಣ್ಣನ್ನು ಸೃಷ್ಟಿಸಿರುವನು. 7 ಕಾರಣದಿಂದಲೇ ಗಂಡು ತನ್ನ ತಂದೆಯನ್ನೂ, ತಾಯಿಯನ್ನೂ ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಂಡು, 8ಅವರಿಬ್ಬರು ಒಂದೇ ಶರೀರವಾಗಿರುವರೆಂದು ಬರೆದಿದೆ. ಹೀಗಿರುವಲ್ಲಿ ಅವರಿನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. 9ಆದುದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ,"
ಎಂದರು. 10ಯೇಸುವಿನ ಶಿಷ್ಯರು ಮನೆಯಲ್ಲಿ ಅದೇ ವಿಷಯವನ್ನು ಯೇಸುವಿಗೆ ಪುನಃ ಕೇಳಿದಾಗ 11ಅವರು,
"ಯಾರಾದರೂ ತನ್ನ ಹೆಂಡತಿಯನ್ನು ಬಿಟ್ಟು ಇನ್ನೊಬ್ಬಳನ್ನು ಮದುವೆಯಾದರೆ ಅವನು ಅವಳಿಗೆ ವಿರುದ್ಧವಾಗಿ ವ್ಯಭಿಚಾರ ಮಾಡುವವನಾಗುತ್ತಾನೆ. 12ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೂ ಅವಳೂ ವ್ಯಭಿಚಾರ ಮಾಡುವವಳಾಗುತ್ತಾಳೆ,"
ಎಂದರು.

ಚಿಕ್ಕಮಕ್ಕಳಿಗೆ ಯೇಸುವಿನ ಆಶೀರ್ವಾದ
(ಮತ್ತಾಯ 19:13-15; ಲೂಕ 18:15-17)

13ಬಳಿಕ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಅವರ ಬಳಿಗೆ ತಂದಾಗ ಅವರ ಶಿಷ್ಯರು ತಂದವರನ್ನು ಗದರಿಸಿದರು. 14ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ,
"ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ; ಅವುಗಳಿಗೆ ಅಡ್ಡಿ ಮಾಡಬೇಡಿರಿ; ದೇವರ ರಾಜ್ಯವು ಇಂಥವರದೇ. 15ನಿಮಗೆ ನಿಜವಾಗಿ ಹೇಳುತ್ತೇನೆ, ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವರು ಅದರೊಳಕ್ಕೆ ಪ್ರವೇಶಿಸಲಾರರು
16ಎನ್ನುತ್ತಾ ಮಕ್ಕಳನ್ನು ಅಪ್ಪಿಕೊಂಡು ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದರು

ಹಣದ ಭ್ರಮೆಯಿಂದುಂಟಾಗುವ ಕೇಡು
(ಮತ್ತಾಯ 19:16-30; ಲೂಕ 18:18-30)

17ಯೇಸುವು ಅಲ್ಲಿಂದ ಹೊರಟು ದಾರಿಯಲ್ಲಿ ಸಾಗುತ್ತಿದ್ದಾಗ ಒಬ್ಬನು ಓಡುತ್ತಾ ಬಂದು ಅವರ ಮುಂದೆ ಮೊಣಕಾಲೂರಿ,
"ಒಳ್ಳೆಯ ಬೋಧಕರೇ, ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕು?"
ಎಂದು ಅವರನ್ನು ಕೇಳಿದನು. 18ಯೇಸುವು ಅವನಿಗೆ,  
"ನೀನೇಕೆ ನನ್ನನ್ನು ಒಳ್ಳೆಯವನೆಂದು ಕರೆಯುವೆ? ದೇವರೊಬ್ಬನ ಹೊರತು ಮತ್ತಾರೂ ಒಳ್ಳೆಯವನಲ್ಲ. 19ನಿನಗೆ ವ್ಯಭಿಚಾರ ಮಾಡಬಾರದು, ಕೊಲ್ಲಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮೋಸ ಮಾಡಬಾರದು, ನಿನ್ನ ತಂದೆಯನ್ನೂ ತಾಯಿಯನ್ನೂ ಗೌರವಿಸಬೇಕು ಎಂಬ ಆಜ್ಞೆಗಳು ಗೊತ್ತಿವೆಯಲ್ಲಾ,"
ಎಂದರು. 20ಆಗ ಅವನು ಪ್ರತ್ಯುತ್ತರವಾಗಿ ಯೇಸುವಿಗೆ,
"ಗುರುವೇ, ನಾನು ಇವೆಲ್ಲವುಗಳನ್ನು ನನ್ನ ಬಾಲ್ಯದಿಂದಲೇ ಅನುಸರಿಸುತ್ತಾ ಬಂದಿದ್ದೇನೆ,"
ಎಂದನು. 21ಆಗ ಯೇಸುವು ಅವನನ್ನು ದೃಷ್ಟಿಸಿ ನೋಡಿ ಅವನಿಗೆ ಪ್ರೀತಿಯಿಂದ,
"ನಿನ್ನಲ್ಲೊಂದು ಕೊರತೆ ಇದೆ; ನೀನೀಗಲೇ ಹೊರಟು ಹೋಗಿ ನಿನ್ನದಾಗಿರುವುದನ್ನೆಲ್ಲಾ ಮಾರಿ ಬಡವರಿಗೆ ಹಂಚು; ಆಗ ಪರಲೋಕದಲ್ಲಿ ನಿನ್ನ ಸಂಪತ್ತು ಹೆಚ್ಚಾಗುವುದು; ಅನಂತರ ನೀನು ಬಂದು ನಿನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸು,"
ಎಂದರು. 22ಅಪಾರ ಸಂಪತ್ತಿಗೆ ಒಡೆಯನಾದ ಆತನು ಯೇಸುವಿನ ಮಾತನ್ನು ಕೇಳುತ್ತಲೇ ವ್ಯಸನಗೊಂಡು ಅಲ್ಲಿಂದ ಹೊರಟು ಹೋದನು; 23ಆಗ ಯೇಸು ಸುತ್ತಲೂ ಇರುವ ತಮ್ಮ ಶಿಷ್ಯರನ್ನು ನೋಡಿ,
"ಐಶ್ವರ್ಯವುಳ್ಳವರು ದೇವರ ರಾಜ್ಯವನ್ನು ಸೇರುವುದು ತುಂಬಾ ಕಷ್ಟ,"
ಎಂದರು. 24ಶಿಷ್ಯರು ಅವರ ಮಾತುಗಳಿಗೆ ಬೆರಗಾದರು; ಆದರೆ ಯೇಸು ಅವರಿಗೆ,
"ಮಕ್ಕಳಿರಾ, ದೇವರ ರಾಜ್ಯದಲ್ಲಿ ಪ್ರವೇಶಿಸುವುದು ಎಷ್ಟೋ ಕಷ್ಟ. 25ಐಶ್ವರ್ಯವಂತನು ದೇವರ ರಾಜ್ಯದೊಳಕ್ಕೆ ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ,"
ಎಂದರು. 26 ಮಾತಿಗೆ ಅವರು ಅತ್ಯಾಶ್ಚರ್ಯಪಟ್ಟು,
"ಹಾಗಾದರೆ ಜಗತ್ತಿನಲ್ಲಿ ಯಾರಿಗೆ ತಾನೇ ರಕ್ಷಣೆ ದೊರೆತೀತು?"
ಎಂದು ತಮ್ಮತಮ್ಮೊಳಗೆ ಅಂದುಕೊಂಡರು. 27ಆಗ ಯೇಸುವು ಅವರನ್ನು ದೃಷ್ಟಿಸುತ್ತಾ,
"ಮನುಷ್ಯರಿಗೆ ಇದು ಅಸಾಧ್ಯವಾಗಿದೆ; ಆದರೆ ದೇವರಿಗಲ್ಲ; ಏಕೆಂದರೆ ದೇವರಿಗೆ ಎಲ್ಲವೂ ಸಾಧ್ಯವಾಗಿವೆ,"
ಎಂದರು. 28ತರುವಾಯ ಪೇತ್ರನು ಯೇಸುವಿಗೆ,
"ಇದೋ, ನಾವು ಎಲ್ಲವನ್ನೂ ಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವೆ,"
ಎಂದು ಹೇಳಿದರು. 29ಅದಕ್ಕೆ ಪ್ರತ್ಯುತ್ತರವಾಗಿ ಯೇಸು ,
"ನಾನು ನಿಮಗೆ ನಿಜವಾಗಿ ಹೇಳುತ್ತೇನೆ; ಯಾರು ನನ್ನ ನಿಮಿತ್ತ ಹಾಗು ಸುವಾರ್ತೆಯ ನಿಮಿತ್ತವಾಗಿ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆ-ತಾಯಿಯನ್ನಾಗಲಿ, ಹೆಂಡತಿಯನ್ನಾಗಲಿ, ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟಿರುವನೋ  30ಅವನು ನೂರರಷ್ಟು ಮನೆಗಳನ್ನೂ, ಸಹೋದರರನ್ನೂ, ಸಹೋದರಿಯರನ್ನೂ, ತಾಯಂದಿರನ್ನೂ, ಮಕ್ಕಳನ್ನೂ, ಭೂಮಿಯನ್ನೂ ಹೊಂದುವನಲ್ಲದೆ ಮುಂದಿನ ಲೋಕದಲ್ಲಿ ನಿತ್ಯ ಜೀವವನ್ನೂ ಹೊಂದುವನು. 31ಆದರೆ ಮೊದಲಿನವರಾದ ಅನೇಕರು ಕಡೆಯವರಾಗುವರು; ಕಡೆಯವರಾದವರು ಮೊದಲಿನವರಾಗುವರು,"
ಎಂದು ಹೇಳಿದರು

ಮರಣ ಪುನರುತ್ಥಾನಗಳನ್ನು ಯೇಸು ಮೂರನೆಯ ಸಲ ಮುಂತಿಳಿಸಿದ್ದು
(ಮತ್ತಾಯ 20:17-19; ಲೂಕ 18:31-34)

32ಅವರು ಜೆರುಸಲೇಮಿನ ಹಾದಿಯನ್ನು ಹಿಡಿದು ಸಾಗುತ್ತಿದ್ದಾಗ ಯೇಸು ಎಲ್ಲರಿಗಿಂತ ಮುಂದಾಗಿ ನಡೆಯುತ್ತಿದ್ದುದನ್ನು ಕಂಡು ಶಿಷ್ಯರು ಆಶ್ಚರ್ಯಪಟ್ಟರು; ಆದರೆ ಯೇಸುವನ್ನು ಹಿಂಬಾಲಿಸುತ್ತಿದ್ದವರು ಭಯಪಟ್ಟರು. ಆಗ ಯೇಸುವು ಹನ್ನೆರಡು ಮಂದಿ ಶಿಷ್ಯರನ್ನು ಕರೆದು ತಮಗೆ ಸಂಭವಿಸಲಿರುವವುಗಳು ಯಾವುವೆಂದು ಅವರಿಗೆ ತಿಳಿಸಿದರು.
33"ನೋಡಿರಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ; ಅಲ್ಲಿ ನರಪುತ್ರನನ್ನು ಪ್ರಧಾನಯಾಜಕರಿಗೂ, ಧರ್ಮಶಾಸ್ತ್ರಿಗಳಿಗೂ ಹಿಡಿದುಕೊಡುವರು; ಅವರು ಆತನಿಗೆ ಮರಣದಂಡನೆಯನ್ನು ವಿಧಿಸಿ ಅನ್ಯಜನಗಳ ಕೈಗೆ ಒಪ್ಪಿಸುವರು. 34ಅವರು ಆತನನ್ನು ಅಪಹಾಸ್ಯಗೈದು, ಕೊರಡೆಗಳಿಂದ ಹೊಡೆದು, ಆತನ ಮೇಲೆ ಉಗುಳಿ, ಆತನನ್ನು ಕೊಲ್ಲುವರು; ಮೂರನೇ ದಿನದಲ್ಲಿ ಆತನು ಜೀವಿತನಾಗಿ ಎದ್ದು ಬರುವನು,"
ಎಂದರು

ದೀನಭಾವದ ಕುರಿತು ಶಿಷ್ಯರಿಗೆ ಬೋಧನೆ
(ಮತ್ತಾಯ 20:20-28)

35ಆಗ ಜೆಬೆದಾಯನ ಮಕ್ಕಳಾದ ಯಕೋಬ, ಯೊವಾನ್ನರು ಯೇಸುವಿನ ಬಳಿಗೆ ಬಂದು,
"ಗುರುವೇ, ನಾವು ಇಚ್ಚಿಸಿದುದನ್ನು ನೀವು ನಮಗಾಗಿ ಮಾಡಿಕೊಡಬೇಕೆಂದು ನಾವು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ,"
ಎಂದರು. 36ಅದಕ್ಕೆ ಯೇಸುವು ಅವರಿಗೆ,
"ನಾನು ನಿಮಗೆ ಏನು ಮಾಡಬೇಕೆಂದು ಇಚ್ಚಿಸುತ್ತೀರಿ?"
ಎಂದು ಕೇಳಲು, 37ಅವರು,
"ನೀನು ಮಹಾಮಹಿಮೆಯಲ್ಲಿ ಬರುವಾಗ ನಮ್ಮಿಬ್ಬರಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲಿಯೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಿಸು,"
ಎಂದರು. 38ಅದಕ್ಕೆ ಯೇಸುವು ಅವರಿಗೆ,
"ನೀವು ಏನನ್ನು ಬೇಡಿಕೊಳ್ಳುತ್ತೀರೋ ನಿಮಗೆ ತಿಳಿಯದು; ನಾನು ಕುಡಿಯುವ ಪಾತ್ರೆಯಲ್ಲಿ ನೀವು ಕುಡಿಯುವಿರಾ? ಮತ್ತು ನಾನು ಹೊಂದುವ ದೀಕ್ಷಾಸ್ನಾನವನ್ನು ನೀವು ಹೊಂದುವಿರಾ?"
ಎಂದು ಕೇಳಲು, 39ಅವರು,
"ನಮ್ಮಿಂದಾಗುವುದು,"
ಎಂದರು. ಆದರೆ ಯೇಸು ಅವರಿಗೆ,
"ನಾನು ಕುಡಿಯುವ ಪಾತ್ರೆಯಲ್ಲಿ ನೀವು ನಿಜವಾಗಿಯೂ ಕುಡಿಯುವಿರಿ; ನಾನು ಹೊಂದುವ ದೀಕ್ಷಾಸ್ನಾನವನ್ನು ನೀವೂ ಹೊಂದುವಿರಿ. 40ಆದರೆ ನನ್ನ ಬಲಗಡೆಯಲ್ಲಿ ಮತ್ತು ನನ್ನ ಎಡಗಡೆಯಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹ ಮಾಡುಬೇಕಾದುದು ನಾನಲ್ಲ; ಅದು ಯಾರಿಗಾಗಿ ಸಿದ್ಧಮಾಡಲ್ಪಟ್ಟಿದೆಯೋ ಅವರಿಗೆ ಕೊಡಲಾಗುವುದು,"
ಎಂದರು. 41ಉಳಿದ ಹತ್ತು ಮಂದಿ ಶಿಷ್ಯರು ಅದನ್ನು ಕೇಳಿ, ಯಕೋಬ ಮತ್ತು ಯೊವಾನ್ನರ ಮೇಲೆ ಬಹಳವಾಗಿ ಕೋಪಗೊಂಡರು. 42ಆದರೆ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು,
"ಅನ್ಯಜನಗಳನ್ನು ಆಳುವುದಕ್ಕೆ ನೇಮಿಸಲ್ಪಟ್ಟವರು ಅವರ ಮೇಲೆ ದೊರೆತನ ಮಾಡುತ್ತಾರೆ; ಅವರಲ್ಲಿ ದೊಡ್ಡವರು ಸಣ್ನವರ ಮೇಲೆ ಅಧಿಕಾರ ಮಾಡುತ್ತಾರೆಂದು ನೀವು ಬಲ್ಲಿರಿ. 43ಆದರೆ ನಿಮ್ಮಲ್ಲಿ ಹಾಗಿರಬಾರದು; ನಿಮ್ಮಲ್ಲಿ ದೊಡ್ಡವನಾಗಿರಲು ಬಯಸುವವನು ನಿಮ್ಮ ಸೇವಕನಾಗಿರಬೇಕು. 44ನಿಮ್ಮಲ್ಲಿ ಅತಿಮುಖ್ಯನಾಗಿರಬೇಕೆಂದು ಬಯಸುವವನು ಎಲ್ಲರಿಗೂ ಸೇವಕನಾಗಿರಬೇಕು. 45ಏಕೆಂದರೆ ನರಪುತ್ರನು ಸೇವೆ ಮಾಡಿಸಿಕೊಳ್ಳುವುದಕ್ಕಾಗಿ ಬಂದವನಲ್ಲ, ಆದರೆ ಸೇವೆ ಮಾಡುವುದಕ್ಕೂ ತನ್ನ ಪ್ರಾಣವನ್ನು ಅನೇಕರಿಗಾಗಿ ಅರ್ಪಿಸುವುದಕ್ಕೂ ಬಂದವನು,"
ಎಂದು ಹೇಳಿದರು

ದೃಷ್ಟಿ ದೊರೆತ ಬಾರ್ತಿಮಾಯನೆಂಬ ಒಬ್ಬ ಕುರುಡ 
(ಮತ್ತಾಯ 20:29-34; ಲೂಕ 18:35-43)

46ತರುವಾಯ ಅವರು ಜೆರಿಕೋವಿಗೆ ಬಂದರು; ಯೇಸುವು ತಮ್ಮ ಶಿಷ್ಯರೂ ಹಾಗು ಬಹುಸಂಖ್ಯೆಯ ಜನರೊಂದಿಗೆ ಜೆರಿಕೋವಿನಿಂದ ಹೊರಟಾಗ ತಿಮಾಯನ ಮಗನಾದ ಬಾರ್ತಿಮಾಯನೆಂಬ ಕುರುಡನು ಹಾದಿಯ ಬದಿಯಲ್ಲಿ ಕುಳಿತುಕೊಂಡಿದ್ದನು. 47ಅವನು ಕುರುಡ ಭಿಕ್ಷಕನು. ನಜರೇತಿನ ಯೇಸು ಹಾದಿಯಲ್ಲಿ ಹೋಗುತ್ತಿರುವುದನ್ನು ಕೇಳಿದ ಅವನು,
"ದಾವೀದನ ಪುತ್ರ ಯೇಸುವೇ, ನನ್ನನ್ನು ಕರುಣಿಸು..."
ಎಂದು ಕೂಗಿಕೊಳ್ಳಲಾರಂಭಿಸಿದನು. 48ಅವನನ್ನು ಸುಮ್ಮನಿರುವಂತೆ ಅನೇಕರು ಅವನಿಗೆ ಆಜ್ಞೆ ಮಾಡಿದರು; ಆದರೆ ಅವನು,
 "ದಾವೀದನಕುಮಾರನೇ, ನನ್ನನ್ನು ಕರುಣಿಸು,"
ಎಂದು ಇನ್ನೂ ಹೆಚ್ಚಿನ ಸ್ವರದಲ್ಲಿ ಕೂಗಿದನು. 49ಆಗ ಯೇಸುವು ನಿಂತುಕೊಂಡು ಅವನನ್ನು ಕರೆಯಬೇಕೆಂದು ಶಿಷ್ಯರಿಗೆ ಆಜ್ಞಾಪಿಸಲು ಅವರು ಕುರುಡನನ್ನು ಕರೆದು,
"ಸಮಾಧಾನದಿಂದಿರು; ಏಳು, ಯೇಸುವು ನಿನ್ನನ್ನು ಕರೆಯುತ್ತಿದ್ದಾರೆ,"
ಎಂದು ಅವನಿಗೆ ಹೇಳಿದರು. 50ಅವನು ತನ್ನ ಉಡುಪನ್ನು ತೆಗೆದುಹಾಕಿ ಎದ್ದು ಯೇಸುವಿನ ಬಳಿಗೆ ನಡೆದನು. 51ಯೇಸುವು ಅವನಿಗೆ,
"ನಾನು ನಿನಗೇನು ಮಾಡಬೇಕೆಂದು ನೀನು ಇಚ್ಚಿಸುವೆ?"
ಎಂದು ಕೇಳಲು ಕುರುಡನು ಯೇಸುವಿಗೆ,
"ಸ್ವಾಮಿ, ನನ್ನ ದೃಷ್ಟಿ ನನಗೆ ಬರುವಂತೆ ನೀವು ಮಾಡಬೇಕು,"
ಎಂದನು. 52ಅದಕ್ಕೆ ಯೇಸು ಅವನಿಗೆ,
"ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ,"
ಎಂದರು. ಕೂಡಲೆ ಅವನು ತನ್ನ ದೃಷ್ಟಿಯನ್ನು ಪಡೆದುಕೊಂಡು ಮಾರ್ಗದಲ್ಲಿಯೇ ಯೇಸುವನ್ನು ಹಿಂಬಾಲಿಸತೊಡಗಿದನು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ