ಮಾರ್ಕನು ಬರೆದ ಸುಸಂದೇಶಗಳು
ಯೇಸುವನ್ನು ಕೊಲ್ಲಲು ಒಳಸಂಚು
(ಮತ್ತಾಯ 26:1-5; ಲೂಕ
22:1-2; ಯೊವಾನ್ನ 11:45-53)
1’ಪಾಸ್ಕಹಬ್ಬ’ ಅಂದರೆ ಹುಳಿರಹಿತ ರೊಟ್ಟಿಯ
ಹಬ್ಬವು ಬರುವುದಕ್ಕೆ ಇನ್ನೂ ಎರಡು ದಿನಗಳು
ಮಾತ್ರ ಇದ್ದವು. ಪ್ರಧಾನಯಾಜಕರೂ,ಧರ್ಮಶಾಸ್ತ್ರಿಗಳೂ
ಉಪಾಯದಿಂದ ಯೇಸುವನ್ನು ಹಿಡಿದು ಕೊಲ್ಲಿಸುವ ಹವಣಿಕೆಯಲ್ಲಿದ್ದರು.
2ಆದರೆ
ಹಬ್ಬದ ಸಮಯದಲ್ಲಿ ಅವರು ಈ ಕಾರ್ಯವನ್ನು
ಮಾಡಿದರೆ ಜನರು ದಂಗೆ ಏಳಬಹುದು
ಎಂದು ತಮ್ಮಲ್ಲೇ ಮಾತನಾಡಿಕೊಂಡು ಸುಮ್ಮನಾದರು.
ಸುಗಂಧ ತೈಲಾಭಿಷೇಕ
(ಮತ್ತಾಯ 26:6-13; ಯೊವಾನ್ನ
12:1-8)
3ಬೆಥಾನಿಯದಲ್ಲಿದ್ದ ಕುಷ್ಠರೋಗಿ ಸಿಮೋನನ ಮನೆಯಲ್ಲಿ ಯೇಸುವು
ಊಟಕ್ಕೆ ಕುಳಿತಿದ್ದಾಗ ಒಬ್ಬ ಮಹಿಳೆಯು ಅತಿ
ಶ್ರೇಷ್ಠವಾದ ಸುಗಂಧತೈಲದ ಭರಣಿಯೊಂದನ್ನು ತಂದು ಅದನ್ನು ಒಡೆದು
ಯೇಸುವಿನ ಶಿರಸ್ಸಿನ ಮೇಲೆ ಸುರಿದಳು. 4ಅಲ್ಲಿದ್ದ ಕೆಲವರು ಇದನ್ನು ಕಂಡು
ಕೋಪಗೊಂಡು,
“ಈ ತೈಲವನ್ನು ಹೀಗೆ
ವ್ಯರ್ಥಗೊಳಿಸಿದ್ದೇಕೆ? 5ಇದನ್ನು
ಮುನ್ನೂರು ಬೆಳ್ಳಿಯ ನಾಣ್ಯಗಳಿಗಿಂತ ಹೆಚ್ಚಿನ
ಬೆಲೆಗೆ ಮಾರಿ ಬಡವರಿಗೆಕೊಡಬಹುದಾಗಿತ್ತಲ್ಲವೇ?”
ಎಂದು ಆಕೆಯನ್ನು ನಿಂದಿಸಿದರು. 6ಅದಕ್ಕೆ
ಯೇಸು,
“ಈಕೆಯನ್ನು
ಸುಮ್ಮನೆ ಬಿಡಿರಿ; ಏಕೆ ತೊಂದರೆ
ಕೊಡುತ್ತೀರಿ?ಈಕೆಯು ಒಳ್ಳೆಯ
ಕಾರ್ಯವನ್ನು ಮಾಡಿದ್ದಾಳೆ. 7ಬಡವರು
ಸದಾ ನಿಮಗೆ ಸಿಗುತ್ತಾರೆ; ನಿಮಗೆ
ಮನಸ್ಸಿದ್ದರೆ ಯಾವಾಗ ಬೇಕಾದರೂ ನೀವು
ಅವರಿಗೆ ಸಹಾಯ ಮಾಡಬಹುದು; ಆದರೆ
ನಾನು ನಿಮ್ಮ ಸಂಗಡ ಯಾವಾಗಲೂ
ಇರುವುದಿಲ್ಲ. 8ಆದರೆ
ಆಕೆ ತನ್ನಿಂದ ಏನು ಸಾಧ್ಯವೋ
ಅದನ್ನು ಮಾಡಿದ್ದಾಳೆ; ನನ್ನ ದೇಹವನ್ನು ಮುಂಚಿತವಾಗಿಯೇ
ಶವಸಂಸ್ಕಾರಕ್ಕಾಗಿ ಸಿದ್ಧಪಡಿಸಿದ್ದಾಳೆ. 9ನಿಮಗೆ
ನಾನು ನಿಶ್ಚಯವಾಗಿ ಹೇಳುತ್ತೇನೆ,ಜಗತ್ತಿನಾದ್ಯಂತ ಎಲ್ಲೆಲ್ಲಿ ಈ ಸುವಾರ್ತೆಯನ್ನು ಸಾರಲಾಗುವುದೋ
ಅಲ್ಲೆಲ್ಲಾ ಈಕೆಯ ಸ್ಮರಣಾರ್ಥವಾಗಿ ಈ
ಸತ್ಕಾರ್ಯವನ್ನೂ ಸಹ ಹೇಳುವರು,”
ಎಂದರು.
ಸ್ವಾಮಿದ್ರೋಹಕ್ಕೆ ಸಜ್ಜು
(ಮತ್ತಾಯ 26:14-16; ಲೂಕ
22:3-6)
10ಯೇಸುವಿನ ಹನ್ನೆರಡು ಮಂದಿ
ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು
ಯೇಸುವನ್ನು ಹಿಡಿದು ಕೊಡುವ ದುರುದ್ದೇಶದಿಂದ
ಪ್ರಧಾನ ಯಾಜಕನ ಬಳಿಗೆ ಹೋದನು. 11ವಿಷಯವನ್ನು ತಿಳಿದು ಸಂತೋಷಪಟ್ಟ ಅವರು
ಕಾರ್ಯಸಾಧಿಸಿದರೆ ಅವನಿಗೆ ಹಣ ಕೊಡುವುದಾಗಿ
ವಾಗ್ದಾನ ಮಾಡಿದರು. ಅವನು ಯೇಸುವನ್ನು ಹಿಡಿದುಕೊಡಲು
ಸಮಯಕ್ಕಾಗಿ ಕಾಯತೊಡಗಿದನು.
ಗುರುಶಿಷ್ಯರ ಹಬ್ಬದೂಟ
(ಮತ್ತಾಯ 26:17-25; ಲೂಕ
22:7-14; ಯೊವಾನ್ನ 13:21-30)
12ಅಂದು ಹುಳಿಯಿಲ್ಲದ ರೊಟ್ಟಿಯ
ಹಬ್ಬದ ಮೊದಲನೆಯ ದಿನ ಅಂದರೆ
ಪಾಸ್ಕಹಬ್ಬದ ಕುರಿಮರಿಯನ್ನು ಕೊಯ್ಯುವ ದಿನ. ಶಿಷ್ಯರುಯೇಸುವಿನ
ಬಳಿ ಬಂದು,
“ತಮಗಾಗಿ
ಪಾಸ್ಕ ಭೋಜನವನ್ನು ನಾವೆಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?”
ಎಂದು ಕೇಳಿದರು. 13ಯೇಸುವು
ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು ಅವರಿಗೆ,
“ನೀವು ಪಟ್ಟಣದೊಳಕ್ಕೆ ಹೋಗಿರಿ; ಅಲ್ಲಿ ನೀರಿನ
ಕೊಡವನ್ನು ಹೊತ್ತವನನ್ನು ನೀವು ಕಾಣುವಿರಿ; ಅವನನ್ನುನೀವು
ಹಿಂಬಾಲಿಸಿರಿ. 14ಅವನು
ಯಾವ ಮನೆಯೊಳಕ್ಕೆ ಹೋಗುತ್ತಾನೋ ಆ ಮನೆಯ ಯಜಮಾನನನ್ನು
ಕಂಡು, ‘ನಮ್ಮ ಗುರು, ತಮ್ಮ
ಶಿಷ್ಯರ ಜೊತೆಯಲ್ಲಿ ಪಾಸ್ಕಭೊಜನ ಮಾಡಲು ತಮಗೆ ಕೊಠಡಿ
ಎಲ್ಲಿ ಎಂದು ಕೇಳುತ್ತಾರೆ’ ಎಂದು
ವಿಚಾರಿಸಿರಿ. 15ಅವನು
ಮೇಲುಪ್ಪರಿಗೆಯಲ್ಲಿ ಸಿದ್ಧವಾಗಿರುವ ಸುಸಜ್ಜಿತ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು; ಅಲ್ಲಿ
ನಮಗೆ ಊಟ ಸಿದ್ಧಮಾಡಿರಿ”
ಎಂದು ಹೇಳಿ ಕಳುಹಿಸಿದರು.16ಅವರು ಪಟ್ಟಣಕ್ಕೆ ಹೋಗಿ,
ಯೇಸು ಹೇಳಿದ ಪ್ರಕಾರ ಎಲ್ಲಾ
ವ್ಯವಸ್ಥಿತವಾಗಿರುವುದನ್ನು ಕಂಡು, ಪಾಸ್ಕಭೋಜನವನ್ನು ಸಿದ್ಧಮಾಡಿದರು.
17ಸಂಜೆಯಾದಾಗ, ಯೇಸುವು ತಮ್ಮ ಹನ್ನೆರಡು
ಮಂದಿ ಶಿಷ್ಯರ ಸಂಗಡ ಅಲ್ಲಿಗೆ
ಬಂದರು. 18ಅವರು
ಕುಳಿತುಕೊಂಡು ಊಟಮಾಡುತ್ತಿದ್ದಾಗ
ಯೇಸುವು ಅವರಿಗೆ,
“ನನ್ನೊಂದಿಗೆ
ಊಟ ಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದು
ಕೊಡುವನು ಎಂದು ನಾನುನಿಮಗೆ ಸತ್ಯವಾಗಿ
ಹೇಳುತ್ತೇನೆ,”
ಎಂದರು. 19ಆಗ
ಶಿಷ್ಯರು ಕಳವಳಗೊಂಡು, ‘ಅಂಥವನು ನಾನೋ? ನಾನೋ?’
ಎಂದು ಒಬ್ಬರಾದ
ಮೇಲೊಬ್ಬರು ಕೇಳತೊಡಗಿದರು. 20ಅದಕ್ಕೆ
ಯೇಸು,
“ಊಟದ ಬಟ್ಟಲಲ್ಲಿ ನನ್ನೊಡನೆ ರೊಟ್ಟಿಯನ್ನು ಅದ್ದುತ್ತಿರುವ ಹನ್ನೆರಡು ಮಂದಿಯಲ್ಲೊಬ್ಬ ಅವನು. 21ನರಪುತ್ರನೇನೋ
ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ.
ಆದರೆ ನರಪುತ್ರನಿಗೆ ದ್ರೋಹ ಬಗೆದವನ ದುರ್ಗತಿಯನ್ನು
ಏನೆಂದು ಹೇಳಲಿ? ಆ ಮನುಷ್ಯನು
ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು!”
ಎಂದರು.
ಪವಿತ್ರ ಭೋಜನ
(ಮತ್ತಾಯ 26:26-30; ಲೂಕ
22:15-20; 1ಕೊರಿಂಥ 11:23-25)
22ಅವರು ಊಟಮಾಡುತ್ತಿರುವಾಗ ಯೇಸು
ರೊಟ್ಟಿಯನ್ನು ತೆಗೆದು ದೇವರನ್ನು ಸ್ತುತಿಸಿ
ಅದನ್ನು ಮುರಿದು ತಮ್ಮ ಶಿಷ್ಯರಿಗೆ
ಕೊಡುತ್ತಾ,
“ಇದನ್ನು
ಸ್ವೀಕರಿಸಿ ನೀವು ಭುಜಿಸಿರಿ; ಇದು
ನನ್ನ ಶರೀರ”
ಎಂದರು.
23ಅನಂತರ ಪಾನಪಾತ್ರೆಯನ್ನು
ತೆಗೆದುಕೊಂಡು ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಅವರಿಗೆ
ಕೊಟ್ಟರು; ಅವರೆಲ್ಲರೂ ಅದರಲ್ಲಿದ್ದುದನ್ನು ಕುಡಿದರು. 24ಯೇಸುವು
ಅವರಿಗೆ,
“ಇದು ಸಮಸ್ತ ಜನರಿಗಾಗಿ ಸುರಿಸಲ್ಪಡುವಒಡಂಬಡಿಕೆಯ
ನನ್ನ ರಕ್ತ.* 25ನಾನು
ದೇವರ ಸಾಮ್ರಾಜ್ಯದಲ್ಲಿ ಇದನ್ನು ಹೊಸದಾಗಿ ಕುಡಿಯುವ
ಆ ದಿನದವರೆಗೆ ನಾನಿನ್ನು
ದ್ರಾಕ್ಷಾರಸವನ್ನುಕುಡಿಯುವುದಿಲ್ಲವೆಂದು
ನಿಮಗೆ ನಿಶ್ಚಯವಾಗಿ ಹೇಳುತ್ತೇನೆ,”
ಎಂದರು.
26ಬಳಿಕ ಅವರೆಲ್ಲರೂ
ಕೀರ್ತನೆ ಹಾಡುತ್ತಾ ಓಲಿವ್ ವೃಕ್ಷಗಳ ಗುಡ್ಡಕ್ಕೆಹೊರಟರು.
ಪೇತ್ರನ ನಿರಾಕರಣೆ
(ಮತ್ತಾಯ 26:31-35; ಲೂಕ
22:31-34; ಯೊವಾನ್ನ 13:36-38)
27ಅನಂತರ ಯೇಸುವು ಅವರಿಗೆ,
“’ಕುರುಬನನ್ನು ಕೊಲ್ಲುವೆನು,
ಕುರಿಗಳು ಚದರುವುವು’
ಎಂದು ಪವಿತ್ರಗ್ರಂಥದಲ್ಲಿ ಬರೆದಿರುವಂತೆ ನೀವೆಲ್ಲರೂ ನನ್ನಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟುವಿರಿ.
28ನಾನು ಪುನರುತ್ಥಾನ
ಹೊಂದಿ ನಿಮಗಿಂತ ಮೊದಲು ಗಲಿಲೇಯಕ್ಕೆ
ಹೋಗುವೆನು”,
ಎಂದರು.
29ಆಗ ಪೇತ್ರನು
ಯೇಸುವಿಗೆ,
“ಎಲ್ಲರೂ
ತಮ್ಮಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟಿದರೂ
ನಾನು ಮಾತ್ರ ಹಾಗೆ ಮಾಡೆನು”,
ಎಂದನು.
30ಅದಕ್ಕೆ ಯೇಸು,
“ಇದೇ ರಾತ್ರಿ ಕೋಳಿಯು ಎರಡು
ಸಾರಿ ಕೂಗುವ ಮೊದಲು ನೀನು
ನನ್ನನ್ನು ಮೂರು ಸಾರಿ ಅಲ್ಲಗಳೆಯುವೆ,
ಎಂದು ನಾನು ನಿನಗೆ ನಿಶ್ಚಯವಾಗಿ
ಹೇಳುತ್ತೇನೆ”,
ಎಂದರು.
31ಆದರೆ ಪೇತ್ರನು,
“ನಾನು ನಿಮ್ಮಸಂಗಡ ಸಾಯಬೇಕಾಗಿ ಬಂದರೂ ನಿಮ್ಮನ್ನು ನಿರಾಕರಿಸೆನು”,
ಎಂದು ಆವೇಶಭರಿತನಾಗಿ ಹೇಳಿದನು. ಹಾಗೆಯೇ ಉಳಿದವರೂ ಹೇಳಿದರು.
ಗೆತ್ಸೆಮನೆ ತೋಪಿನಲ್ಲಿ ಯೇಸುವಿನ ಮನೋವೇದನೆ
(ಮತ್ತಾಯ 26:36-46; ಲೂಕ
22:39-46)
32ಆ ನಂತರ ಅವರು
ಗೆತ್ಸೆಮನೆ ಎಂಬ ತೋಪಿಗೆ ಬಂದರು.
ಯೇಸುವು ತಮ್ಮ ಶಿಷ್ಯರಿಗೆ,
“ನಾನು ಪ್ರಾರ್ಥನೆ ಮಾಡಿ ಬರುವವರೆಗೂನೀವು ಇಲ್ಲಿಯೇ
ಕುಳಿತುಕೊಂಡಿರಿ”,
ಎಂದರು.
33ಪೇತ್ರ, ಯಕೋಬ,
ಯೊವಾನ್ನರನ್ನು ತಮ್ಮೊಂದಿಗೆ ಕರೆದುಕೊಂಡು ಮುಂದಕ್ಕೆ ಹೋದರು. ಅಲ್ಲಿ ಅತೀವ ಮನೋಕ್ಲೇಷದಿಂದ ಚಿಂತಾಕ್ರಾಂತರಾಗಿ,
34”ನನ್ನ ಮನೋವೇದನೆ ಪ್ರಾಣ
ಹಿಂಡುವಷ್ಟು ತೀವ್ರವಾಗಿದೆ. ನೀವು ಇಲ್ಲಿಯೇ ಕಾದುಕೊಂಡಿದ್ದುಎಚ್ಚರವಾಗಿರಿ”
ಎಂದರು.
35ಅನಂತರ ಅವರು
ಸ್ವಲ್ಪ ಮುಂದಕ್ಕೆ ಹೋಗಿ, ನೆಲದ ಮೇಲೆ
ಕುಸಿದು,
“ಸಾಧ್ಯವಾದರೆ
ಈ ವಿಷಮ ಗಳಿಗೆಯು
ನನ್ನಿಂದ ದೂರವಾಗಲಿ”,
ಎಂದು ದೇವರನ್ನು ಭಿನ್ನೈಸಿಕೊಂಡರು. 36ಬಳಿಕ
ಅವರು,
“ಅಪ್ಪಾ,
ಪಿತನೇ, ನಿಮಗೆ ಎಲ್ಲವೂ ಸಾಧ್ಯ!
ಈ ಕಷ್ಟದ ಕೊಡವನ್ನು
ತೆಗೆದುಬಿಡಿ. ಆದರೂ ನನ್ನ ಚಿತ್ತದಂತೆ
ಅಲ್ಲ, ನಿಮ್ಮ ಚಿತ್ತವಿದ್ದಂತೆಯೇ ಆಗಲಿ”,
ಎಂದು ಹೇಳಿದರು. 37ತರುವಾಯ
ಹಿಂದಿರುಗಿ ಬಂದು ಆ ಮೂವರು
ಶಿಷ್ಯರು ನಿದ್ರೆಮಾಡುವುದನ್ನು ಕಂಡು ಪೇತ್ರನಿಗೆ,
“ಸಿಮೋನನೇ,
ನೀನು ನಿದ್ರೆಮಾಡುತ್ತಿರುವೆಯಾ? ಒಂದು ಗಳಿಗೆಯಾದರೂಎಚ್ಚರವಾಗಿರಲು ನಿನಗೆ ಸಾಧ್ಯವಾಗದೇ
ಹೋಯಿತೇ? 38ನೀವು
ಪ್ರಲೋಭನೆಗೆ ಒಳಗಾಗದಂತೆ ಎಚ್ಚರದಿಂದಿದ್ದು ಪ್ರಾರ್ಥನೆ ಮಾಡಿರಿ`ಆತ್ಮಕ್ಕೇನೋ ಆಸಕ್ತಿಯಿದೆ;
ಆದರೆ ದೇಹಕ್ಕೆ ಶಕ್ತಿ ಸಾಲದು”,
ಎಂದರು.
39ಯೇಸುವು ಮರಳಿ
ಹಿಂದಕ್ಕೆ ಹೋಗಿ ಮೊದಲು ಪ್ರಾರ್ಥನೆ
ಮಾಡಿದಂತೆಯೇ ಮಾಡಿದರು. 40ಪುನಃ
ಅವರು ಶಿಷ್ಯರ ಬಳಿಗೆ ಹಿಂತಿರುಗಿ
ಬಂದಾಗ ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು;
ಅವರ ಕಣ್ಣುಗಳು ಬಹುಭಾರವಾಗಿದ್ದವು. ಏನು ಹೇಳಬೇಕೆಂದು ಯೇಸುವಿಗೆ
ತಿಳಿಯದೇ ಹೋಯಿತು. 41ಅವರು
ಮೂರನೆಯ ಸಾರಿ ಅವರ ಬಳಿ
ಬಂದು,
“ನೀವಿನ್ನೂ
ನಿದ್ರಿಸಿ ವಿಶ್ರಮಿಸುತ್ತಿರುವಿರಾ? ಸಾಕು, ಸಮಯವು ಸಮೀಪಿಸಿತು.
ನರಪುತ್ರನು ದುರ್ಜನರ ಕೈವಶನಾಗಲಿದ್ದಾನೆ. 42ಎದ್ದೇಳಿ, ಹೋಗೋಣ;ಇದೋ, ನನ್ನನ್ನು ಹಿಡಿದುಕೊಡುವವನು ಸಮೀಪಿಸಿದ್ದಾನೆ”,
ಎಂದು ಹೇಳಿದರು.
ಯೂದನ ಗುರುದ್ರೋಹ
(ಮತ್ತಾಯ 26:47-56; ಲೂಕ
22:47-53; ಯೊವಾನ್ನ 18:2-18)
43ಯೇಸುವು ಶಿಷ್ಯರೊಂದಿಗೆ ಮಾತನಾಡುತ್ತಿರುವಾಗಲೇ
ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ
ಯೂದನು ಅಲ್ಲಿಗೆ ಬಂದನು. ಖಡ್ಗ
ಮತ್ತು ಲಾಠಿಗಳನ್ನು ಹಿಡಿದ ಒಂದು ಗುಂಪು
ಅವನಿಂದಿಗಿತ್ತು. ಪ್ರಧಾನ ಯಾಜಕರೂ, ಧರ್ಮಶಾಸ್ತ್ರಿಗಳೂ
ಮತ್ತು ಊರ ಪ್ರಮುಖರು ಅವರನ್ನು
ಕಳುಹಿಸಿದ್ದರು. 44ಗುರುದ್ರೋಹಿ
ಯೂದನು ತನ್ನ ಸಂಗಡ ಬಂದಿದ್ದವರಿಗೆ,
“ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ
ಆ ವ್ಯಕ್ತಿ; ಆತನನ್ನುಹಿಡಿದು
ಭದ್ರವಾಗಿ ತೆಗೆದುಕೊಂಡು ಹೋಗಿರಿ”
ಎಂದು ಮುಂಚೆಯೇ ಸೂಚನೆಯನ್ನು ಕೊಟ್ಟಿದ್ದನು`
45ಅದರಂತೆಯೇ ಅವನು
ಅಲ್ಲಿಗೆ ಬಂದ ಕೂಡಲೆ ನೇರವಾಗಿ ಯೇಸುವಿನ
ಬಳಿಗೆ ಹೋಗಿ,
“ಗುರುದೇವ”
ಎನ್ನುತ್ತಾ
ಯೇಸುವಿಗೆ ಮುದ್ದಿಟ್ಟನು. 46ತಕ್ಷಣವೇ
ಆ ಜನರು ಯೇಸುವನ್ನು
ಹಿಡಿದು ಬಂಧಿಸಿದರು. 47ಆಗ
ಹತ್ತಿರ ನಿಂತಿದ್ದವರಲ್ಲಿ ಒಬ್ಬನು ತನ್ನ ಕತ್ತಿಯನ್ನು
ಹಿರಿದು ಪ್ರಧಾನ ಯಾಜಕನ ಆಳನ್ನು
ಹೊಡೆದು, ಅವನ ಕಿವಿಯನ್ನು ಕತ್ತರಿಸಿ
ಬಿಟ್ಟನು. 48ಯೇಸುವು
ಅಲ್ಲಿಗೆ ಬಂದಿದ್ದ ಆ ಗುಂಪಿಗೆ,
“ದರೋಡೆಕೋರನನ್ನು ಹಿಡಿಯುವುದಕ್ಕೆ ಎಂಬಂತೆ ನನ್ನನ್ನು ಬಂಧಿಸಲು
ಕತ್ತಿಗಳನ್ನು ಮತ್ತು ಮಾಡುತ್ತಿದ್ದೆ; ಆಗ
ನೀವು ನನ್ನನ್ನು ಬಂಧಿಸಲಿಲ್ಲ. 49ಆದರೆ
ಪವಿತ್ರಗ್ರಂಥದಲ್ಲಿ ಬರೆದಿರುವುದು ನೆರವೇರುವಂತೆ ಇವೆಲ್ಲಾ ಸಂಭವಿಸಿದೆ”,
ಎಂದರು.
50ಆಗ ಯೇಸುವಿನ
ಶಿಷ್ಯರೆಲ್ಲರೂ ಅವರನ್ನು ಬಿಟ್ಟು ಓಡಿಹೋದರು.
51ಮೈಮೇಲೆ ದುಪ್ಪಟಿಯನ್ನು
ಮಾತ್ರ ಸುತ್ತಿಕೊಂಡಿದ್ದ ಯುವಕನೊಬ್ಬನು ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನನ್ನು ಹಿಡಿಯಲು ಆ
ಜನರು ಯತ್ನಿಸಿದಾಗ 52ಅವನು
ಆ ದುಪ್ಪಟಿಯನ್ನು ಬಿಟ್ಟು
ಬರಿ ಮೈಯಲ್ಲಿ ಓಡಿಹೋದನು.
ಉಚ್ಚನ್ಯಾಯ ಸಭೆಯ ಮುಂದೆ ಯೇಸು
(ಮತ್ತಾಯ 26:57-68; ಲೂಕ
22:54-55, 63-71; ಯೊವಾನ್ನ 18:13-14, 19-24)
53ಇದಾದ ಮೇಲೆ ಅವರು
ಯೇಸುವನ್ನು ಪ್ರಧಾನಯಾಜಕನ ಬಳಿಗೆ ಕರೆದುಕೊಂಡು ಹೋದರು;
ಅಲ್ಲಿ ಎಲ್ಲಾ ಮುಖ್ಯಯಾಜಕರೂ, ಪ್ರಮುಖರೂ,
ಧರ್ಮಶಾಸ್ತ್ರಿಗಳೂ ಸಭೆ ಸೇರಿದ್ದರು. 54ಪೇತ್ರನು ದೂರದಿಂದಲೇ ಯೇಸುವನ್ನು
ಹಿಂಬಾಲಿಸುತ್ತಾ ಇದ್ದನು. ಅವನು ಪ್ರಧಾನಯಾಜಕನ
ಭವನದವರೆಗೂ ಬಂದು ಅಲ್ಲಿದ್ದ ಪಹರೆಯವರ
ಸಂಗಡ ಕುಳಿತು ಚಳಿಕಾಯಿಸಿಕೊಳ್ಳುತ್ತಿದ್ದನು. 55ಅತ್ತ
ಪ್ರಧಾನಯಾಜಕರೂ, ಉಚ್ಚನ್ಯಾಯಸಭೆಯವರೂ ಸೇರಿ ಯೇಸುವನ್ನು ಕೊಲ್ಲಿಸಲು
ಅವರ ವಿರುದ್ಧ ಸಾಕ್ಷಿ ಹುಡುಕುತ್ತಿದ್ದರು.
ಆದರೆ ಅವರಿಗೆ ಸರಿಯಾದ ಒಂದು
ಸಾಕ್ಷ್ಯವೂ ಲಭಿಸಲಿಲ್ಲ. 56ಅನೇಕರು
ಮುಂದೆ ಬಂದು ಯೇಸುವಿನ ವಿರುದ್ಧ
ಸುಳ್ಳುಸಾಕ್ಷಿ ಹೇಳಿದರಾದರೂ ಅವರ ಸಾಕ್ಷ್ಯ ಒಂದಕ್ಕೊಂದು
ಸರಿಬೀಳಲಿಲ್ಲ. 57ಕೆಲವರು
ಎದ್ದು, 58”’ಕೈಗಳಿಂದ
ಕಟ್ಟಿರುವ ಈ ಮಹಾದೇವಾಲಯವನ್ನು ನಾನು
ಕೆಡವಿ ಕೈಯಿಂದ ಕಟ್ಟದ ಇನ್ನೊಂದನ್ನು
ಮೂರು ದಿನಗಳಲ್ಲಿಕಟ್ಟುವೆನು’ ಎಂದು ಈತನು ಹೇಳಿದ್ದನ್ನು
ನಾವು ಕೇಳಿಸಿಕೊಂಡಿದ್ದೇವೆ”, ಎಂದರು. 59ಹೀಗಿದ್ದರೂ
ಅವರ ಸಾಕ್ಷಿಗಳು ಒಂದಕ್ಕೊಂದು
ಸರಿಹೋಗಲಿಲ್ಲ.
60ಆಗ ಪ್ರಧಾನಯಾಜಕನು ಎದ್ದು
ನಿಂತು ಯೇಸುವನ್ನು ನೋಡಿ,
“ಈ ಜನರು ನಿನ್ನ ವಿರುದ್ಧವಾಗಿ
ತಂದ ಆರೋಪಗಳನ್ನು ಕೇಳುತ್ತಿರುವೆಯಾ? ಇವುಗಳಿಗೆ ನಿನ್ನ ಉತ್ತರವೇನು?”,
ಎಂದು ಕೇಳಿದನು. 61ಆದರೆ
ಯೇಸುವು ಯಾವ ಉತ್ತರವನ್ನೂ ಕೊಡದೆ
ಮೌನವಾಗಿದ್ದರು.ಪ್ರಧಾನಯಾಜಕನು ಮತ್ತೆ,
“ಸ್ತುತ್ಯ
ಆ ದೇವರಪುತ್ರ ಹಾಗೂ
ಅಭಿಷಿಕ್ತ ಲೋಕೊದ್ಧಾರಕ ನೀನೇನೋ?,”
ಎಂದು ಯೇಸುವನ್ನು ಕೇಳಿದನು.62ಅದಕ್ಕೆ
ಯೇಸುವು,
“ಹೌದು ಅದು ನಾನೇ, ಅಲ್ಲದೆ
ನರಪುತ್ರನು ಸರ್ವಶಕ್ತ ದೇವರ ಬಲಪಾರ್ಶ್ವದಲ್ಲಿ ಆಸೀನನಾಗಿರುವದನ್ನೂ,
ಆಕಾಶದಮೇಘಗಳಲ್ಲಿ ಬರುವುದನ್ನೂ ನೀವು ನೋಡುವಿರಿ,”
ಎಂದರು.
63ಒಡನೆಯೇ ಪ್ರಧಾನಯಾಜಕನು
ತನ್ನ ಬಟ್ಟೆಗಳನ್ನು ಹರಿದುಕೊಂಡು, ಇನ್ನು ನಮಗೆ ಹೆಚ್ಚಿನ ಸಾಕ್ಷಿಗಳ
ಅವಶ್ಯಕತೆ ಏನಿದೆ? 64ಈತನಾಡಿದ
ದೇವದೂಷಣೆಯನ್ನು ನೀವೇ ಕೇಳಿದ್ದೀರಿ! ನಿಮ್ಮ
ಅಭಿಪ್ರಾಯವೇನು?,”
ಎಂದು ಸಭೆಯನ್ನು ಕೇಳಿದನು. ಅವರೆಲ್ಲರೂ,
“ಇವನಿಗೆ
ಮರಣದಂಡನೆ ಆಗಬೇಕು,”
ಎಂದು ತೀರ್ಮಾನವಿತ್ತರು. 65ತರುವಾಯ
ಅವರಲ್ಲಿ ಕೆಲವರು ಯೇಸುವಿನ ಮೇಲೆ ಉಗುಳಿ
ಅವರ ಮುಖಕ್ಕೆ ಮುಸುಕನ್ನು ಹಾಕಿ
ಗುದ್ದಿ,
“ನಿನ್ನನ್ನು ಗುದ್ದಿದವರು ಯಾರು? ಪ್ರವಾದಿಸಿ ಹೇಳು,”
ಎನ್ನುತ್ತಿದ್ದರು.
ಅಲ್ಲದೆ ಅಲ್ಲಿದ್ದ ಪಹರೆಯವರೂ ಅವರಿಗೆ ಏಟನ್ನು ಕೊಟ್ಟು,
ತಮ್ಮ ವಶಕ್ಕೆ ತೆಗೆದುಕೊಂಡರು.
ಅವನಾರೋ ನಾನರಿಯೆ
(ಮತ್ತಾಯ 26:69-75; ಲೂಕ
22:56-62; ಯೊವಾನ್ನ 18:15-18, 25-27)
66ಪೇತ್ರನು ಭವನದ ಬಳಿಯಲ್ಲಿದ್ದಾಗ
ಪ್ರಧಾನಯಾಜಕನ ಸೇವಕಿಯೊಬ್ಬಳು ಅಲ್ಲಿಗೆ ಬಂದಳು. 67ಚಳಿಕಾಯಿಸಿಕೊಳ್ಳುತ್ತಿದ್ದ ಪೇತ್ರನನ್ನು ಕಂಡು ಅವನನ್ನು ದೃಷ್ಟಿಸಿ ನೋಡಿ,
“ನೀನು ಸಹ ಆ ನಜರೇತಿನ
ಯೇಸುವಿನೊಂದಿಗೆ ಇದ್ದವನಲ್ಲವೇ?”
ಎಂದು ಕೇಳಿದಳು. 68ಆದರೆ
ಪೇತ್ರನುಅವಳು ಹೇಳಿದ್ದನ್ನು ಅಲ್ಲಗಳೆದನು.
“ನನಗೆ ಗೊತ್ತಿಲ್ಲ, ನೀನೇನು ಹೇಳುತ್ತೀಯೋ ನನಗೆ
ತಿಳಿಯದು,”
ಎಂದು ಹೇಳಿ ಅಲ್ಲಿಂದ ಎದ್ದು
ಹೊರಗಿನ ದ್ವಾರಮಂಟಪದ ಬಳಿಗೆ ಹೋದನು (ಆಗ
ಕೋಳಿಯು ಕೂಗಿತು). 69ಆ
ದಾಸಿಯು ಅಲ್ಲಿಯೂ ಅವನನ್ನು ನೋಡಿ
ಪಕ್ಕದಲ್ಲಿ ನಿಂತಿದ್ದವರಿಗೆ,
“ಇವನುಸಹ
ಅವರಲ್ಲಿ ಒಬ್ಬನು,”
ಎಂದು ತಿಳಿಸಿದಳು. ಪೇತ್ರನು ಪುನಃ ಆಕೆ
ಹೇಳಿದ್ದನ್ನು ನಿರಾಕರಿಸಿದನು. 70ತುಸು
ಹೊತ್ತಾದ ಬಳಿಕ ಪಕ್ಕದಲ್ಲಿ ನಿಂತಿದ್ದವನು ಪೇತ್ರನತ್ತ ತಿರುಗಿ,
“ನಿಜವಾಗಿಯೂ ನೀನು ಅವರಲ್ಲಿ ಒಬ್ಬನು;
ಏಕೆಂದರೆ ನೀನೂ ಗಲಿಲೇಯದವನೇ. ನಿನ್ನ
ಭಾಷೆ ಅದನ್ನ ಸ್ಥಿರಪಡಿಸುತ್ತದೆ,”
ಎಂದನು.
71ಆಗ ಪೇತ್ರನು,
“ನೀವು ಹೇಳುವ ಆ ಮನುಷ್ಯ
ಯಾರೆಂದು ನಾನರಿಯೆ,”
ಎಂದು ಹೇಳಿ ಆಣೆಯಿಡುವುದಕ್ಕೂ, ಶಪಿಸುವುದಕ್ಕೂ
ತೊಡಗಿದನು. ಆ ಕೂಡಲೇ ಕೋಳಿ
ಎರಡನೆಯ ಸಲ ಕೂಗಿತು. 72ಎರಡು ಸಾರಿ ಕೋಳಿ ಕೋಳಿ
ಕೂಗುವುದಕ್ಕಿಂತಮುಂಚಿತವಾಗಿ, ‘ನೀನು ನನ್ನನ್ನು ಮೂರು
ಸಾರಿ ನಿರಾಕರಿಸುವೆ,’ ಎಂದು ಯೇಸು ಹೇಳಿದ
ಮಾತು ಪೇತ್ರನ ನೆನಪಿಗೆ ಬಂದು
ಅವನು ಬಿಕ್ಕಿ ಬಿಕ್ಕಿಅತ್ತನು.
*ಕೆಲವು ಪ್ರತಿಗಳಲ್ಲಿ ‘ಹೊಸ ಒಡಬಡಿಕೆಯ ರಕ್ತ’ ಎಂದಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ