ಮಾರ್ಕನು ಬರೆದ ಸುಸಂದೇಶಗಳು
ಸ್ನಾನಿಕ ಯೊವಾನ್ನನ ವಿಷಯ
(ಮತ್ತಾಯ 3:1-12; ಲೂಕ
3:1-8; ಯೊವಾನ್ನ1:19-28)
1ದೇವಕುಮಾರ ಯೇಸು ಕ್ರಿಸ್ತರ ವಿಷಯವಾದ ಸುವಾರ್ತೆಯ ಆರಂಭ:
2'ಇದೋ, ಕಳುಹಿಸುವೆನೆನ್ನ ದೂತನನು ನಿನಗಿಂತಲೂ ಮೊದಲು,
ಸಿದ್ಧಗೊಳಿಸುವನವನು ನಿನ್ನ ಮಾರ್ಗವನು ಮೊದಲು'
ಎಂದಿಹರು ದೇವರು.
3'ಸಿದ್ಧಪಡಿಸಿರಿ ಪ್ರಭುವಿನ ಮಾರ್ಗವನು
ನೇರಗೊಳಿಸಿರಿ ಅವರಾಗಮನಕೆ ಹಾದಿಯನು'
ಎಂದು ಘೋಷಿಸುತಿಹನು ಬೆಂಗಾಡಿನಲೋರ್ವನು...
4ಎಂದು ಯೆಶಾಯ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಪ್ರಕಾರ ಜನರು ಪಾಪಗಳ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿ, ಪಶ್ಚಾತ್ತಾಪಪಟ್ಟು ಅದರ ಸಂಕೇತವಾಗಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಬೇಕೆಂದು ಸ್ನಾನಿಕ ಯೊವಾನ್ನನು ಅಡವಿಯಲ್ಲಿ ಸಾರಿಹೇಳುತ್ತಾ ದೀಕ್ಷಾಸ್ನಾನವನ್ನು ನೀಡುತ್ತಿದ್ದನು. 5ಆಗ ಇಡೀ ಜುದೇಯ ಸೀಮೆಯೂ, ಜೆರುಸಲೇಮಿನ ಜನರೂ ಅವನ ಬಳಿಗೆ ಬಂದು ತಮ್ಮ ತಮ್ಮ ಪಾಪಗಳನ್ನು ನಿವೇದಿಸಿಕೊಂಡು ಜೋರ್ಡನ್ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. 6ಈ ಯೊವಾನ್ನನು ಒಂಟೆಯ ಕೂದಲಿನ ಹೊದಿಕೆಯನ್ನು ಹೊದ್ದುಕೊಂಡು, ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡಿದ್ದನು; ಮಿಡತೆಗಳು ಮತ್ತು ಕಾಡುಜೇನು ಅವನ ಆಹಾರವಾಗಿತ್ತು. 7ಅವನು,
“ನನಗಿಂತಲೂ ಹೆಚ್ಚು ಶಕ್ತರು ನನ್ನ ನಂತರ ಬರುತ್ತಾರೆ; ನಾನು ಬಾಗಿ ಅವರ ಜೋಡುಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. 8ನಾನು ನಿಮಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಅವರು ನಿಮಗೆ ಪವಿತ್ರಾತ್ಮರಿಂದಲೇ ದೀಕ್ಷಾಸ್ನಾನ ಮಾಡಿಸುವರು,”
ಎಂದು ಸಾರಿ ಹೇಳುತ್ತಿದ್ದನು.
ಯೇಸುವಿನ ಪ್ರಬೋಧನೆ
(ಮತ್ತಾಯ 3:13-4:17; ಲೂಕ
3:21, 22; 4:1-15; ಯೊವಾನ್ನ 1:31-33)
9ಆ ದಿನಗಳಲ್ಲಿ ಯೇಸುವು ಗಲಿಲೇಯದ ನಜರೇತಿನಿಂದ ಬಂದು ಜೋರ್ಡನ್ ನದಿಯಲ್ಲಿ ಯೊವಾನ್ನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು. 10ಯೇಸು ನೀರಿನೊಳಗಿಂದ ಹೊರಗೆ ಬಂದ ಕೂಡಲೆ ಆಕಾಶವು ತೆರೆಯಲ್ಪಡುವುದನ್ನು ಮತ್ತು ಪವಿತ್ರಾತ್ಮರು ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿಯುವುದನ್ನು ಕಂಡರು. 11ಆಗ,
“ಇವನು ಪ್ರಿಯನಾಗಿರುವ ನನ್ನ ಮಗನು; ನಾನು ಇವನನ್ನು ಮೆಚ್ಚಿದ್ದೇನೆ,”
ಎಂಬ ವಾಣಿಯು ಆಕಾಶದೊಳಗಿನಿಂದ ಕೇಳಿಬಂತು. 12ಕೂಡಲೆ ಯೇಸುವು ಪವಿತ್ರಾತ್ಮರಿಂದ ಪ್ರೇರಿತರಾಗಿ ಅರಣ್ಯಕ್ಕೆ ಹೋದರು. 13ಅಲ್ಲಿ ಅವರು ನಲವತ್ತು ದಿನಗಳ ಕಾಲ ಮೃಗಗಳೊಂದಿಗೆ ಇದ್ದು, ಸೈತಾನನಿಂದ ಪ್ರಲೋಭನೆಗೊಳಗಾದರು; ಮತ್ತು ದೇವದೂತರಿಂದ ಉಪಚರಿಸಲ್ಪಟ್ಟರು. 14ಸ್ನಾನಿಕ
ಯೊವಾನ್ನನು ಸೆರೆಗೆ ಹಾಕಲ್ಪಟ್ಟ ಬಳಿಕ ಯೇಸು ಗಲಿಲೇಯಕ್ಕೆ ಹೋಗಿ,
15“ಕಾಲವು ಕೂಡಿ ಬಂದಿದೆ. ದೇವರ ರಾಜ್ಯವು ಸಮೀಪಿಸಿದೆ. ಪಶ್ಚಾತ್ತಾಪಪಟ್ಟು ಪಾಪಗಳಿಗೆ ವಿಮುಖರಾಗಿರಿ. ದೇವರಿಗೆ ಅಭಿಮುಖರಾಗಿರಿ. ಸುವಾರ್ತೆಗಳಲ್ಲಿ ನಂಬಿಕೆಯನ್ನಿಡಿರಿ,”
ಎಂದು ಸಾರಿದರು.
ಯೇಸು ಪ್ರಥಮ ಶಿಷ್ಯರನ್ನು ಆರಿಸಿದ್ದು
(ಮತ್ತಾಯ 4:18-22; ಲೂಕ
5:1-11)
16ಯೇಸುವು ಗಲಿಲೇಯ ಸಮುದ್ರ ತೀರದಲ್ಲಿ ನಡೆಯುತ್ತಿದ್ದಾಗ, ಸೀಮೋನನು ಮತ್ತು ಅವನ ತಮ್ಮನಾದ ಅಂದ್ರೆಯನು ಸಮುದ್ರದಲ್ಲಿ ಬಲೆಬೀಸುತ್ತಿರುವುದನ್ನು
ಕಂಡರು.
17ಆಗ ಯೇಸು ಅವರಿಗೆ,
“ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು,”
ಎಂದು ಹೇಳಿದರು. 18ಆ ಕೂಡಲೆ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. 19ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ಯೇಸುವು ಜೆಬೆದಾಯನ ಮಗನಾದ ಯಕೋಬನನ್ನು ಮತ್ತು ಅವನ ತಮ್ಮನಾದ ಯೊವಾನ್ನನನ್ನು ಕಂಡರು. ಅವರು ತಮ್ಮ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. 20ತಡಮಾಡದೆ
ಯೇಸುವು ಅವರನ್ನೂ ಕರೆದರು. ಅವರು ತಕ್ಷಣವೇ ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ಯೇಸು ದೆವ್ವಗಳನ್ನು ಬಿಡಿಸಿ ರೋಗಿಗಳನ್ನು
ಗುಣಪಡಿಸಿದ್ದು
(ಮತ್ತಾಯ 8:14-16; ಲೂಕ
4:31-41)
21ಬಳಿಕ ಅವರೆಲ್ಲರೂ ಕಪೆರ್ನೌಮ್ ಎಂಬ ಊರಿಗೆ ಹೋದರು. ಯೇಸುವು ಆ ಸಬ್ಬತ್ ದಿನದಂದು ಸಭಾಮಂದಿರಕ್ಕೆ ಹೋಗಿ ಬೋಧಿಸಲು ಆರಂಭಿಸಿದರು. 22ಅಲ್ಲಿದ್ದ ಜನರು ಯೇಸುವು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಅವರು ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದವರಂತೆ ಬೋಧಿಸುತ್ತಿದ್ದರು. 23 ಅದೇ
ಸಮಯದಲ್ಲಿ, ಆ ಸಭಾಮಂದಿರದಲ್ಲಿ ದೆವ್ವ ಹಿಡಿದಿದ್ದ ಒಬ್ಬ ಮನುಷ್ಯನಿದ್ದನು. 24ಅವನು,
“ನಜರೇತಿನ ಯೇಸುವೇ, ನಮ್ಮ ಗೊಡವೆ ನಿಮಗೇಕೆ? ನಮ್ಮನ್ನು ನಾಶಮಾಡಲು ಬಂದಿರುವಿರಾ? ನೀವು ಯಾರೆಂಬುದು ನನಗೆ ಚೆನ್ನಾಗಿ ಗೊತ್ತು; ನೀವು ದೇವರಿಂದ ಪ್ರತಿಷ್ಟಿತರಾದವರು,”
ಎಂದು ಕೂಗಿ ಹೇಳಿದನು. 25ಆದರೆ ಯೇಸು ಅದನ್ನು ಗದರಿಸುತ್ತಾ,
“ಸುಮ್ಮನಿರು, ಅವನನ್ನು ಬಿಟ್ಟು ಹೋಗು!”
ಎಂದು ಹೇಳಿದರು. 26ಆಗ ಆ ದೆವ್ವವು ಅವನನ್ನು ಒದ್ದಾಡಿಸಿ, ಬೀಳಿಸಿ, ಗಟ್ಟಿಯಾಗಿ ಕೂಗುತ್ತಾ ಅವನೊಳಗಿಂದ ಹೊರಕ್ಕೆ ಬಂತು. 27ಆಗ ಜನರೆಲ್ಲರೂ ಬೆರಗಾಗಿ,
“ಇದೇನಿದು ಹೊಸ ಬೋಧನೆ! ಇವರು ದೆವ್ವಗಳಿಗೂ ಅಧಿಕಾರದಿಂದ ಅಪ್ಪಣೆ ಕೊಡುತ್ತಾರಲ್ಲ ಮತ್ತು ಅವು ವಿಧೇಯತೆ ತೋರಿಸುತ್ತಿವೆಯಲ್ಲಾ!”
ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 28ಕೂಡಲೆ ಅವರ ಕುರಿತ ಸುದ್ದಿಯು ಗಲಿಲೇಯದ ಸುತ್ತಲಿನ ಎಲ್ಲಾ ಪ್ರದೇಶಗಳಿಗೂ ಹಬ್ಬಿತು.
29ಆಮೇಲೆ ಅವರು ಸಭಾಮಂದಿರದಿಂದ ಹೊರಬಂದು ಯಕೋಬ ಯೊವಾನ್ನರ ಸಂಗಡ ಸೀಮೋನ ಮತ್ತು ಅಂದ್ರೆಯರ ಮನೆಗೆ ಬಂದರು. 30ಅಲ್ಲಿ ಸಿಮೋನನ ಅತ್ತೆ ಜ್ವರದಿಂದ ಬಳಲಿ ಮಲಗಿದ್ದಳು. ಅವರು ತಕ್ಷಣ ಆಕೆಯ ವಿಷಯವನ್ನು ಯೇಸುವಿಗೆ ತಿಳಿಸಿದರು. 31ಯೇಸುವು ಆಕೆಯ ಬಳಿಗೆ ಹೋಗಿ ಕೈಹಿಡಿದು ಎಬ್ಬಿಸಿದರು; ಕೂಡಲೇ ಜ್ವರವು ಆಕೆಯನ್ನು ಬಿಟ್ಟುಹೋಯಿತು. ಆಕೆಯು ಅವರನ್ನು ಉಪಚರಿಸಿದಳು.
32ಸಂಜೆ ಸೂರ್ಯಾಸ್ತಮಾನದ ಬಳಿಕ ಜನರು ರೋಗಿಗಳೆಲ್ಲರನ್ನೂ, ದೆವ್ವಹಿಡಿದವರನ್ನೂ ಯೇಸುವಿನ ಬಳಿಗೆ ಕರೆತಂದರು. 33ಹೀಗೆ ಇಡೀ ಊರು ಆ ಮನೆಯ ಬಾಗಿಲಲ್ಲಿ ಒಟ್ಟುಗೂಡಿತ್ತು. 34ಯೇಸುವು ವಿವಿಧ ರೋಗಗಳಿಂದ ಪೀಡಿತರಾಗಿದ್ದ ಅನೇಕರನ್ನು ಗುಣಪಡಿಸಿದ್ದಲ್ಲದೆ, ಅನೇಕ ದೆವ್ವಗಳನ್ನೂ ಬಿಡಿಸಿದರು; ಆದರೆ ದೆವ್ವಗಳಿಗೆ ಯೇಸುವಿನ ಬಗ್ಗೆ ತಿಳಿದಿದ್ದ ಕಾರಣ ಅವರು ಅವುಗಳನ್ನು ಮಾತನಾಡಲು ಬಿಡಲಿಲ್ಲ.
ಯೇಸುವು ಸುಸಂದೇಶವನ್ನು ಸಾರುತ್ತಾ
ಗಲಿಲೇಯದಲ್ಲಿ ಸಂಚರಿಸಿದ್ದು
(ಲೂಕ 4:42-44)
35ಮುಂಜಾನೆ ಇನ್ನೂ ಕತ್ತಲಿರುವಾಗಲೇ ಯೇಸುವು ಎದ್ದು ಕಾಡಿನಲ್ಲಿನ ಏಕಾಂತ ಸ್ಥಳಕ್ಕೆ ಹೋಗಿ ಅಲ್ಲಿ ಪ್ರಾರ್ಥಿಸಲಾರಂಭಿಸಿದರು. 36ಸೀಮೋನನು
ಮತ್ತು ಅವನೊಂದಿಗಿದ್ದವರು ಯೇಸುವನ್ನು ಹುಡುಕುತ್ತಾ ಬಂದು, ಅವರು ಅಡವಿಯಲ್ಲಿರುವುದನ್ನು ಕಂಡು,
37“ಎಲ್ಲರೂ ನಿಮ್ಮನ್ನು ಹುಡುಕುತ್ತಿದ್ದಾರೆ,”
ಎಂದು ಹೇಳಿದರು. 38ಆದರೆ ಯೇಸುವು ಅವರಿಗೆ,
“ನಾವು ಹತ್ತಿರದಲ್ಲಿರುವ ಬೇರೆ ಯಾವುದಾದರೂ ಊರಿಗೆ ಹೋಗೋಣ. ಅಲ್ಲಿ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ,”
ಎಂದು ಹೇಳಿದರು. 39ಅದರಂತೆಯೇ
ಅವರು ಗಲಿಲೇಯದಾದ್ಯಂತ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ, ದೆವ್ವಗಳನ್ನು ಬಿಡಿಸುತ್ತಾ ಹೋದರು.
ಕುಷ್ಟರೋಗಿಯನ್ನು ಗುಣಪಡಿಸಿದ್ದು
(ಮತ್ತಾಯ 8:2-4; ಲೂಕ
5:12-16)
40ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿ ಬಂದು ಮೊಣಕಾಲೂರಿ,
“ನಿಮಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲಿರಿ,”
ಎಂದು ಬೇಡಿಕೊಳ್ಳಲು 41ಯೇಸುವು ಕನಿಕರಪಟ್ಟು ತಮ್ಮ ಕೈಚಾಚಿ ಅವನನ್ನು ಮುಟ್ಟಿ,
“ನನಗೆ ಮನಸ್ಸಿದೆ, ನೀನು ಗುಣಹೊಂದು,”
ಎಂದು ಹೇಳಿದರು. 42-44ಕೂಡಲೆ ಕುಷ್ಠವು ಗುಣವಾಯಿತು.
ಯೇಸುವು ಅವನಿಗೆ,
“ಈ ವಿಷಯವನ್ನು ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿ ಪರೀಕ್ಷಿಸಿಕೋ. ಆನಂತರ ಮೋಶೆಯು ವಿಧಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ”
ಎಂದು ಎಚ್ಚರಿಸಿ ಕೂಡಲೆ ಅವನನ್ನು ಕಳುಹಿಸಿಬಿಟ್ಟರು, 45ಆದರೆ ಅವನು ಹೋಗಿ ಆ ಸಂಗತಿಯನ್ನು ಎಲ್ಲೆಡೆಗೂ ಸಾರಿದ ಕಾರಣ ಯೇಸುವಿಗೆ ಬಹಿರಂಗವಾಗಿ ಯಾವ ಪಟ್ಟಣಕ್ಕೂ ಕಾಲಿಡಲು ಸಾಧ್ಯವಾಗದೇ ಏಕಾಂತ ಸ್ಥಳಗಳಲ್ಲಿ ಇರತೊಡಗಿದರು. ಆದರೂ ಜನರು ಎಲ್ಲ ದಿಕ್ಕುಗಳಿಂದಲೂ ಅವರನ್ನು ಅರಸುತ್ತಾ ಬರತೊಡಗಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ